ನೇಪಾಳದ ಆರ್ಮಿ ವರಿಷ್ಠ ರುಗ್ಮಾಂಗದ್ ಕಟಾವಾಲ್ ಅವರನ್ನು ಪ್ರಧಾನಿ ಪುಷ್ಪಕಮಾಲ್ ಅಲಿಯಾಸ್ ಪ್ರಚಂಡ ಅವರು ವಜಾಗೊಳಿಸಿದ್ದರೆ, ಮತ್ತೊಂದೆಡೆ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರು ಪ್ರಚಂಡ ಅವರ ಕ್ರಮ ಸಂವಿಧಾನ ಬಾಹಿರವಾದದ್ದೆಂದು ಸೂಚಿಸಿ ಕಟುವಾಲ್ ವಜಾ ಆದೇಶವನ್ನು ರದ್ದುಗೊಳಿಸುವ ಮೂಲಕ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಬೂದಿಮಚ್ಚಿದ ಕೆಂಡದಂತಿದ್ದು, ಕ್ಷಿಪ್ರ ಕ್ರಾಂತಿ ನಡೆಯಲಿದೆಯೇ ಎಂಬ ಆತಂಕ ಹುಟ್ಟು ಹಾಕಿದೆ.
ಪ್ರಚಂಡ ಅವರು ಕೈಗೊಂಡ ನಿರ್ಧಾರ ನೇಪಾಳದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆದರೆ ಅಧ್ಯಕ್ಷ ಯಾದವ್ ಅವರು, ಕಟಾವಾಲ್ ವಿರುದ್ಧ ಪ್ರಚಂಡ ಕೈಗೊಂಡ ಕ್ರಮ ಸರಿಯಾದುದಲ್ಲ, ಅಲ್ಲದೇ ಈ ಬಗ್ಗೆ ಅವರು ನನ್ನಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದು, ವಜಾ ಆದೇಶವನ್ನು ರದ್ದುಗೊಳಿಸಿದ್ದಾರೆ.
ಒಟ್ಟಿನಲ್ಲಿ ನೇಪಾಳ ಮಾವೋವಾದಿ ಸರ್ಕಾರ ಮತ್ತೊಂದು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ. ಇದರೊಂದಿಗೆ ನೆರೆ ದೇಶವಾದ ಭಾರತಕ್ಕೂ ತಲೆನೋವಾಗಿ ಪರಿಣಮಿಸಿದೆ. ರಾಜಾಡಳಿತದ ವಿರುದ್ಧ ಶಸ್ತ್ರ ಸಜ್ಜಿತ ಹೋರಾಟ ನಡೆಸಿ, ಅಧಿಕಾರದ ಗದ್ದುಗೆ ಹಿಡಿದಿರುವ ಮಾವೋವಾದಿಗಳ ಹಾದಿ ವಿಭಿನ್ನ ದಿಕ್ಕಿನತ್ತ ಸಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ನೇಪಾಳ ನ್ಯಾಯ ವ್ಯವಸ್ಥೆಯಲ್ಲಿ 'ಕಾಂಗರೂ ಕೋರ್ಟ್' ಜಾರಿ ಮಾಡುವ ಉದ್ದೇಶ ಹೊಂದಿರುವ ಪ್ರಚಂಡ ಕ್ಷಿಪ್ರ ಕ್ರಾಂತಿಗೆ ಮುಂದಾಗುತ್ತಾರೆಯೇ?ಎಂಬ ಪ್ರಶ್ನೆ ಉದ್ಭವಿಸಿದೆ.
ನೇಪಾಳ ಪ್ರಧಾನಿಯಾಗಿರುವ ಪ್ರಚಂಡ ಅವರು ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಆರ್ಮಿ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಒತ್ತಡ ಹೇರಿದ್ದರೂ ಕೂಡ ಪ್ರಚಂಡ ದುಡುಕಿನ ನಿರ್ಧಾರ ಕೈಗೊಂಡಿದ್ದರು. |