ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಕರಾಚಿ ವಿಮಾನ ಹತ್ತವುದಕ್ಕೆ ಭಾನುವಾರ ಅಡ್ಡಿಪಡಿಸಲಾಗಿದೆ. ತಹರೀಕ್ ಇ ಇನ್ಸಾಫ್ ಪಕ್ಷದ ಖಾನ್ ಅವರಿಗೆ ಸಿಂಧ್ ಪ್ರಾಂತದಲ್ಲಿ ಒಂದು ತಿಂಗಳ ಕಾಲ ಪ್ರವೇಶ ನಿಷೇಧಿಸಿರುವುದೇ ಈ ತಡೆಗೆ ಕಾರಣ.ಖಾನ್ ಅವರು ತಮ್ಮ ಪಕ್ಷ ಕರಾಚಿಯಲ್ಲಿ ನಡೆಸಿದ್ದ ರ್ಯಾಲಿಯೊಂದರಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನಕ್ಕೆ ಬೋರ್ಡಿಂಗ್ ಪಾಸ್ ನೀಡಲಾಗಿತ್ತು. ಆದರೆ ವಿಮಾನ ಹತ್ತಲು ಇವರಿಗೆ ಸಾಧ್ಯವಾಗಲಿಲ್ಲ. ಕಾನೂನು ಸಿಬ್ಬಂದಿಗಳು ಖಾನ್ ಅವರನ್ನು ವಿಮಾನ ಹತ್ತಲು ತಡೆದರು. ಸಿಂಧ್ ಸರ್ಕಾರ ಸಿಂಧ್ ಪ್ರಾಂತಕ್ಕೆ ಖಾನ್ ಪ್ರವೇಶವನ್ನು ನಿಷೇಧಗೊಳಿಸಿರುವುದರಿಂದ ಈ ಪ್ರವೇಶ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಖಾನ್, ನಾನು ಪಾಕಿಸ್ತಾನಿ ನಾಗರಿಕ. ಯಾವುದೇ ಕಾನೂನಿನ ಅಡಿಯಲ್ಲಿ ನಾನು ಕರಾಚಿಗೆ ಪ್ರಯಾಣ ಬೆಳೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಡ್ಡು ಹೊಡೆದಿದ್ದಾರೆ.ಮುತ್ತಾಹೈಡ್ ಕೋಮಿ ಮೂವ್‌ಮೆಂಟ್ (ಎಂಕ್ಯುಎಂ) ಸಂಘಟನೆ ಸಿಂಧ್ ಸರ್ಕಾರದ ಭಾಗವಾಗಿದ್ದು, ಈ ಲಂಘಟನೆಯೇ ಕೇಂದ್ರದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕತ್ವದ ಸರ್ಕಾರದ ಮೂಲಕ ಬ್ಲ್ಯಾಕ್‌ಮೈಲ್ ತಂತ್ರಗಾರಿಕೆಯಲ್ಲಿ ನನ್ನನ್ನು ಸಿಂಧ್ ಪ್ರಾಂತಕ್ಕೆ ಪ್ರವೇಶಿಸದಂತೆ ತಡೆಯುತ್ತಿವೆ ಎಂದು ಖಾನ್ ಆರೋಪಿಸಿದರು.ಇದೇ ವೇಳೆ, ಕರಾಚಿಗೆ ತಾಲಿಬಾನಿನಿಂದ ಯಾವುದೇ ಬೆದರಿಕೆ ಇಲ್ಲ. ಇರುವ ಬೆದರಿಕೆಯೆಲ್ಲ, ಮುತ್ತಾಹೈಡ್ ಕೋಮಿ ಮೂವ್‌ಮೆಂಟಿನ ಅಧ್ಯಕ್ಷ ಅಲ್ತಾಫ್ ಹಸಾನ್‌ರದ್ದೇ ಎಂದು ಗಂಭೀರವಾಗಿ ಖಾನ್ ಆರೋಪಿಸಿದರು.ಎಂಕ್ಯುಎಂ ರಾಜಕೀಯ ಪಕ್ಷವೇ ಅಲ್ಲ. ಅದೊಂದು ದೊಡ್ಡ ಮಾಫಿಯಾ ಎಂದು ಟೀಕಿಸಿದ ಖಾನ್, ಸರ್ಕಾರ ಇಂತಹ ಮಾಫಿಯಾಗಳ ಕಾನೂನು ಅಸಮ್ಮತ ಕುಮ್ಮಕ್ಕುಗಳಿಗೆ ಬಲಿಯಾಗಬಾರದು ಎಂದು ಹೇಳಿದರು.ಇದೇ ಸಂದರ್ಭ ಖಾನ್ ಅವರ ಪಕ್ಷ ತೆಹರೀಕ್ ಇ ಇನ್ಸಾಫ್‌ನ ಕಾರ್ಯಕರ್ತರು ಖಾನ್ ಅವರ ಪ್ರವೇಶ ನಿಷೇಧವನ್ನು ವಿರೋಧಿಸಿ ಲಾಹೋರ್, ಪೇಶಾವರ ಹಾಗೂ ಕರಾಚಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು. |