ಉಗ್ರಗಾಮಿಗಳು ಬಂಧಿತ ಉಗ್ರರನ್ನು ಜೈಲಿನಿಂದ ಬಂಧಮುಕ್ತಗೊಳಿಸುವ ಸಂಚು ಹೊಂದಿರುವುದಾಗಿ ಗುಪ್ತಚರ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಶಂಕಿತ ಆರೋಪಿಗಳನ್ನು ಕೂಡಿ ಹಾಕಿರುವ ರಾವಲ್ಪಿಂಡಿ ಜೈಲಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ಕಮಾಂಡರ್ ಜಾಕೀರ್ ರೆಹಮಾನ್ ಲಕ್ವಿ, ಜರಾರ್ ಷಾ, ಹಮಾದ್ ಅಮಿನ್ ಸಿದ್ದಿಕಿ, ಅಬು ಅಲ್ ಖ್ವಾಮಾ ಮತ್ತು ಶಾಹೀದ್ ಜಮಲ್ ರಿಯಾಜ್‌ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇಡಲಾಗಿದೆ.ಉಗ್ರಗಾಮಿ ಸಂಘಟನೆಗಳು ಬಂಧಿತ ಉಗ್ರರನ್ನು ಬಂಧಮುಕ್ತ ಮಾಡಿಸುವ ಸಂಚು ರೂಪಿಸಿರುವ ಮುನ್ನೆಚ್ಚರಿಕೆ ಪರಿಣಾಮ, ರಾವಲ್ಪಿಂಡಿ ಜೈಲಿಗೆ ಹೆಚ್ಚುವರಿಯಾಗಿ 300 ಭದ್ರತಾ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜೈಲು ಹೊರ ಹಾಗೂ ಒಳಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. |