ನೇಪಾಳ ಮಿಲಿಟರಿ ವರಿಷ್ಠ ಕಾಟುವಾಲ್ ವಜಾ ಪ್ರಕರಣದ ವಿವಾದಿಂದ ಪ್ರಧಾನಿ ಪ್ರಚಂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಇದೀಗ ನೂತನ ಮೈತ್ರಿ ಸರ್ಕಾರ ರಚನೆಗಾಗಿ ಕಸರತ್ತು ಆರಂಭಗೊಂಡಿದೆ.
ಆರ್ಮಿ ವರಿಷ್ಠ ರುಗ್ಮಾಂಗದ್ ಕಾಟುವಾಲ್ ಅವರನ್ನು ಪ್ರಧಾನಿ ಪ್ರಚಂಡ ಅವರು ಹುದ್ದೆಯಿಂದ ವಜಾಗೊಳಿಸಿದ್ದು, ನೇಪಾಳದ ರಾಜಕಾರಣದಲ್ಲಿ ವಿವಾದ ಸೃಷ್ಟಿಗೆ ಕಾರಣವಾಗಿತ್ತು. ಏತನ್ಮಧ್ಯೆ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರು ಪ್ರಚಂಡ ಅವರು ಕೈಗೊಂಡ ನಿರ್ಧಾರ ಸರಿಯಲ್ಲ ಎಂದು ಹೇಳಿ, ಕಾಟಾವಲ್ ವಜಾ ಆದೇಶವನ್ನು ತಿರಸ್ಕರಿಸಿದ್ದರು. ಇದರಿಂದ ಕುಪಿತಗೊಂಡ ಪ್ರಧಾನಿ ಪ್ರಚಂಡ ಸೋಮವಾರ ರಾಜೀನಾಮೆ ನೀಡುವ ಮೂಲಕ ರಾಜಕೀಯ ಬಿಕ್ಕಟ್ಟು ಉದ್ಭವಿಸಿತ್ತು.
ನೇಪಾಳ ಸಂಸತ್‌ನಲ್ಲಿ ಮಾವೋವಾದಿಗಳೇ ಅತ್ಯಧಿಕ ಬಲ ಹೊಂದಿದೆ, ರಾಜಕೀಯ ಅಸ್ಥಿರತೆ ವಿರುದ್ಧ ಬೀದಿ ಹೋರಾಟ ನಡೆಸುವುದಾಗಿ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮಂಗಳವಾರ ಮಧ್ನಾಹ್ನ ನಡೆಯಲಿರುವ ಸಭೆಗೆ ಮಾವೋ ಸದಸ್ಯರು ಭಾಗವಹಿಸಲಿದ್ದಾರೆಯೇ ಎಂಬುದು ಅನುಮಾನ ಮೂಡಿಸಿದೆ.
ಈ ಎಲ್ಲಾ ಗೊಂದಲಗಳ ನಡುವೆ ಒಮ್ಮತಾಭಿಪ್ರಾಯ ಹೊಂದಿರುವ ರಾಜಕೀಯ ಪಕ್ಷಗಳು ನೇಪಾಳದಲ್ಲಿ ನೂತನ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇರುವುದಾಗಿ ಪ್ರಮುಖ ವಿರೋಧಪಕ್ಷವಾದ ನೇಪಾಳಿ ಕಾಂಗ್ರೆಸ್ ಹಿರಿಯ ಮುಖಂಡ ಬಿಮಲೇಂದ್ರಾ ನಿಧಿ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ನೂತನ ಮೈತ್ರಿ ಸರ್ಕಾರದಲ್ಲಿ ತಾನು ಪ್ರಮುಖ ಪಾತ್ರ ವಹಿಸುವುದಿಲ್ಲ ಎಂದು ನೇಪಾಳಿ ಕಾಂಗ್ರೆಸ್ ಸ್ಪಷ್ಟಪಡಿಸಿದ್ದು, ಕಮ್ಯುನಿಷ್ಟ್‌ನ ಯುಎಂಎಲ್ ಸರ್ಕಾರ ರಚಿಸುವುದಾದರೆ ಅದಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದು, ಇಂದು ಮಧ್ನಾಹ್ನ ನಡೆಯಲಿರುವ ಮಾತುಕತೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ. |