ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಉತ್ತರ ಕೊರಿಯಾ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕಮ್ಯುನಿಷ್ಟ್ ದೇಶದ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದೆ.
ಉತ್ತರ ಕೊರಿಯಾ ಭಾಗದಲ್ಲಿ ನೂತನವಾಗಿ ದಾಳಿ ನಡೆಸುತ್ತ ಅಮೆರಿಕ ಸಂಚು ರೂಪಿಸುತ್ತಿರುವುದಾಗಿ ಆಡಳಿತಾರೂಢ ಪಕ್ಷದ ಮುಖವಾಣಿ ರೋಡೊನ್ ಸಿನ್‌ಮನ್ ತನ್ನ ಸಂಪಾದಕೀಯ ಬರಹದಲ್ಲಿ ತಿಳಿಸಿದೆ.
ಇತ್ತೀಚಿಗೆ ರಾಷ್ಟ್ರವು ಹಮ್ಮಿಕೊಂಡ ರಾಕೆಟ್ ಉಡಾವಣೆಯನ್ನು ವಿಶ್ವಸಂಸ್ಥೆ ಖಂಡಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾಮಂಡಳಿ ಕ್ಷಮಾಪಣೆ ಕೋರಬೇಕೆಂದು ಉತ್ತರ ಕೊರಿಯ ಆಗ್ರಹಿಸಿತ್ತು. ಕ್ಷಮಾಪಣೆ ಕೋರದಿದ್ದರೆ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವುದಾಗಿ ಅದು ಬೆದರಿಕೆ ಹಾಕಿತ್ತು.
ಕ್ಷಮಾಪಣೆ ಕೇಳದಿದ್ದರೆ ಪರಮಾಣು ಮತ್ತು ಖಂಡಾಂತರ ಕ್ಷಿಪಣಿ ಪರೀಕ್ಷೆಗಳು ಸೇರಿದಂತೆ ಸ್ವಯಂರಕ್ಷಣೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಉತ್ತರ ಕೊರಿಯ ಎಚ್ಚರಿಸಿತ್ತು. ಉತ್ತರ ಕೊರಿಯ ಏಪ್ರಿಲ್ 5ರಂದು ರಾಕೆಟ್ ಉಡಾವಣೆ ಮಾಡಿದಾಗ, ಈ ಉಡಾವಣೆಯನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ಕ್ಷಿಪಣಿ ಪರೀಕ್ಷೆಯ ಸೋಗು ಎಂದು ಬಣ್ಣನೆ ಮಾಡಿತ್ತು.
|