ಭಾರತದ ಜತೆ ತಂಟೆ ತಕರಾರಿಗೆ ಗುಡ್‌ಬೈ ಹೇಳಿ ಅದಕ್ಕೆ ಬದಲಾಗಿ ಉಗ್ರವಾದಿಗಳ ಅಟ್ಟಹಾಸವನ್ನು ಕೊನೆಗಾಣಿಸುವತ್ತ ಗಮನ ಹರಿಸಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕಿವಿಮಾತು ಹೇಳಿದ್ದಾರೆ.ವೈಟ್‌ಹೌಸ್‌ನ ಪತ್ರಿಕಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ಹೇಳುವಂತೆ, ಕಳೆದ ವಾರವೇ ಒಬಾಮಾ ಅವರು ಈ ಮಾತನ್ನು ಹೇಳಿದ್ದಾರೆ. ಆದರೆ ಭಾರತದಿಂದ ಪಾಕಿಸ್ತಾನಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಒಬಾಮಾ ಜರ್ದಾರಿಗೆ ಹೇಳಿದ್ದಾರೋ ಎಂಬ ಪ್ರಶ್ನೆಗೆ ಮಾತ್ರ ಅವರು, ಇದಕ್ಕೆ ಉತ್ತರವನ್ನು ಒಬಾಮಾ ಅವರೇ ನೀಡಿದ್ದಾರೆ ಎಂದಷ್ಟೆ ಹೇಳಿದರು. ಅಲ್ಲದೆ, ಒಬಾಮಾ ಅವರು ಸ್ಪಷ್ಟವಾಗಿ ಕಳೆದ ವಾರ ತಮ್ಮ 100ನೇ ದಿನದ ಆಚರಣೆ ಸಂದರ್ಭವೇ, ಪಾಕಿಸ್ತಾನಕ್ಕೆ ತನ್ನೊಳಗಿನ ಶಕ್ತಿಗಳಿಂದಲೇ ಆತಂಕ ಇದೆ ಎಂದಿದ್ದರು ಎಂದು ತಿಳಿಸಿದರು.ಭಾರತದಿಂದ ಪಾಕಿಸ್ತಾನಕ್ಕೆ ಇರುವ ಆತಂಕವನ್ನು ತಪ್ಪಾಗಿ ಆರ್ಥೈಸಿಕೊಳ್ಳಲಾಗಿದೆ. ಆದರೆ, ಪಾಕಿಸ್ತಾನಕ್ಕೆ ಸದ್ಯ ಇರುವ ಬೃಹತ್ ಆತಂಕ ತನ್ನ ಆಂತರಿಕ ಭಯೋತ್ಪಾದನೆಯಿಂದಲೇ ಎಂದು ಒಬಾಮಾ ಹೇಳಿದ್ದರು.ಹಾಗಾದರೆ ಭಾರತ ಹಾಗೂ ಪಾಕಿಸತಾನ ನಡುವಿನ ಸಾಮರಸ್ಯ ಬಲವರ್ಧನೆಗೆ ಅಮೆರಿಕ ಮಧ್ಯಪ್ರವೇಶಿಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ಈ ಬಗ್ಗೆ ಚಿಂತನೆಯಿದೆ. ಒಬಾಮಾ ಅವರಿಗೆ ಈ ಕಾಳಜಿ ಇದೆ ಎಂದು ಗಿಬ್ಸ್ ತಿಳಿಸಿದರು.ಒಬಾಮಾ ಅವರು ಜರ್ದಾರಿ ಜತೆಗೆ ಈ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ ಪಾಕಿಸ್ತಾನಕ್ಕೆ ಬಿಡುಗಡೆ ಮಾಡಿದ 100 ಮಿಲಿಯನ್ ಡಾಲರ್‌ಗಳನ್ನು ಅದು ತನ್ನ ಅಣ್ವಸ್ತ್ರ ಬಲವರ್ಧನೆಗೆ ಹೇಗೆ ಸೂಕ್ತವಾಗಿ ಬಳಸಿಕೊಂಡಿದೆ ಎಂಬುದರ ಬಗ್ಗೆಯೂ ಒಬಾಮಾ ತಿಳಿಯಲಿದ್ದಾರೆ ಎಂದು ಗಿಬ್ಸ್ ತಿಳಿಸಿದರು. ಜತೆಗೆ, ಪಾಕಿಸ್ತಾನದಲ್ಲಿ ಅಣ್ವಸ್ತ್ರಗಳ ಭದ್ರತೆ ಹಾಗೂ ಜಗತ್ತಿನಲ್ಲೇ ಅಣ್ವಸ್ತ್ರಗಳ ಬಗ್ಗೆ ಅಧ್ಯಕ್ಷ ಒಬಾಮಾ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.ಪಾಕ್ ಅಧ್ಯಕ್ಷ ಜರ್ದಾರಿ ಹಾಗೂ ಅಘ್ಪನಿಸ್ತಾನ ಅಧ್ಯಕ್ಷ ಹಮೀದ್ ಕರ್ಝಾಯಿ ಜತೆಗೆ ಒಬಾಮಾ ಅವರು ಹೆಚ್ಚು ಕಾಲ ಕಳೆದಿದ್ದು, ಪಾಕ್- ಅಫ್ಘನ್ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ಎರಡು ದೇಶಗಳ ಮೇಲೆ ಅಮೆರಿಕಕ್ಕೆ ಭದ್ರತಾ ಕಾಳಜಿಯ ದೃಷ್ಠಿಯಿಂದ ವಿಶೇಷ ಸಂಬಂಧವಿದ್ದು, ಕೇವಲ ಅಮೆರಿಕಕ್ಕೆ ಮಾತ್ರವಲ್ಲ. ಆ ಎರಡು ದೇಶಗಳೂ ತಮ್ಮಲ್ಲಿನ ಆಂತರಿಕ ಭಯೋತ್ಪಾದಕರ ವಿರುದ್ಧ ಹೆಚ್ಚಿನ ನಿಗಾ ಇಡಬೇಕು ಎಂದೂ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ಗಿಬ್ಸ್ ತಿಳಿಸಿದರು. |