ನೇಪಾಳದ ಸೇನಾ ಮುಖ್ಯಸ್ಥನರನ್ನು ವಜಾಗೊಳಿಸಿದ ಆದೇಶವನ್ನು ತಿರಸ್ಕರಿಸಿದ ನೇಪಾಳದ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರ ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಹಿಂದೆ ಭಾರತದ ಕೈವಾಡ ಇದೆ ಎಂದು ನೇಪಾಳದ ಮಾವೋವಾದಿಗಳು ಆರೋಪಿಸಿದ್ದಾರೆ.
ದೆಹಲಿಯ ಕೆಲವು ರಾಜಕೀಯ ಶಕ್ತಿಗಳ ಕೈ ಈ ನಿರ್ಧಾರದ ಹಿಂದೆ ಕೆಲಸ ಮಾಡಿವೆ ಎಂದು ನೇರವಾಗಿ ಆರೋಪಿಸಿರುವ ಮಾವೋವಾದಿ ಮುಖಂಡ ಹಾಗೂ ಆರ್ಥಿಕ ಸಚಿವ ಬಾಬುರಾಮ್ ಭಟ್ಟಾರಾಯ್, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದಾರೆ.
ರಾಷ್ಟ್ರಕ್ಕೆ ಮಾರಕವಾಗಿರುವ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲಿರುವ ನಾವು, ನೇಪಾಳದಲ್ಲಿ ಹೊಸ ಪ್ರಜಾಪ್ರಭುತ್ವ ಸರ್ಕಾರ ಉದಯಿಸಲು ಭದ್ರ ಬುನಾದಿ ಹುಟ್ಟುಹಾಕುತ್ತೇವೆ ಎಂದು ಅವರು ತಿಳಿಸಿದರು.
ಹೊಸ ಸರ್ಕಾರದೊಂದಿಗೆ ಮಾವೋವಾದಿಗಳಾದ ನೀವು ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನೇರವಾಗಿ ದೆಹಲಿಯ ಕೆಲವು ರಾಜಕೀಯ ಶಕ್ತಿಗಳು ಹೇಳಿದ ದಾರಿಯಲ್ಲೇ ನಡೆಯುವ ಅಧ್ಯಕ್ಷರು ಮತ್ತೆ ಸರಿದಾರಿಗೆ ಬಂದರೆ ಮಾತ್ರ ನಾವು ಸರ್ಕಾರದ ಜತೆಗೆ ಕೈಜೋಡಿಸುವ ಯೋಚನೆ ಮಾಡಬಹುದು. ಇಲ್ಲವಾದರೆ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಸೇನಾ ವರಿಷ್ಠ ರುಗ್ಮಾಂಗದ್ ಕಾಟುವಾಲ್ ಅವರನ್ನು ಪ್ರಧಾನಿ ಪ್ರಚಂಡ ಅವರು ಹುದ್ದೆಯಿಂದ ವಜಾಗೊಳಿಸಿದ್ದು, ನೇಪಾಳದ ರಾಜಕಾರಣದಲ್ಲಿ ವಿವಾದ ಸೃಷ್ಟಿಗೆ ಕಾರಣವಾಗಿತ್ತು. ಏತನ್ಮಧ್ಯೆ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರು ಪ್ರಚಂಡ ಅವರು ಕೈಗೊಂಡ ನಿರ್ಧಾರ ಸರಿಯಲ್ಲ ಎಂದು ಹೇಳಿ, ಕಾಟಾವಲ್ ವಜಾ ಆದೇಶವನ್ನು ತಿರಸ್ಕರಿಸಿದ್ದರು. ಇದರಿಂದ ಕುಪಿತಗೊಂಡ ಪ್ರಧಾನಿ ಪ್ರಚಂಡ ಸೋಮವಾರ ರಾಜೀನಾಮೆ ನೀಡುವ ಮೂಲಕ ರಾಜಕೀಯ ಬಿಕ್ಕಟ್ಟು ಉದ್ಭವಿಸಿತ್ತು. |