ತಾಲಿಬಾನ್ ಹಿಡಿತವುಳ್ಳ ಸ್ವಾತ್ ಕಣಿವೆ ಪ್ರದೇಶದಲ್ಲಿ ಶಸ್ತ್ರ ಸಜ್ಜಿತ ತಾಲಿಬಾನ್ ಬಂಡುಕೋರರು ರಾಜಾರೋಷವಾಗಿ ನಗರದಲ್ಲಿ ಗಸ್ತು ತಿರುಗುತ್ತಿದ್ದಾರೆ. ಅಲ್ಲದೇ ಪಾಕ್ ಸೈನಿಕ ಪಡೆಯೊಂದಿಗೆ ಘರ್ಷಣೆಗೆ ಇಳಿದಿರುವ ಹಿನ್ನೆಲೆಯಲ್ಲಿ ನಾಗರಿಕರು ಮಿಂಗೋರಾ ಪ್ರದೇಶವನ್ನು ಬಿಡುವಂತೆ ಪಾಕ್ ಸರ್ಕಾರ ಮಂಗಳವಾರ ಮನವಿ ಮಾಡಿಕೊಂಡಿದೆ.
ಸ್ವಾತ್ ಕಣಿವೆ ಪ್ರಮುಖ ಬೀದಿ, ರಸ್ತೆಗಳಲ್ಲಿ ತಾಲಿಬಾನ್ ಶಸ್ತ್ರ ಸಜ್ಜಿತವಾಗಿ ಗಸ್ತು ತಿರುಗಲು ಆರಂಭಿಸಿವೆ. ಬುನೇರ್ ಮತ್ತು ಡಿರ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿರುವ ಸೈನಿಕರ ವಿರುದ್ಧವೇ ತಾಲಿಬಾನ್ ದಾಳಿ ನಡೆಸಿವೆ. ಇಲ್ಲಿನ ಮಿಂಗೋರಾ, ಸ್ವಾತ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮಿಲಿಟರಿ ಮತ್ತು ಉಗ್ರರ ನಡುವೆ ಕಾಳಗ ನಡೆದಿರುವುದಾಗಿ ಖಾಸಗಿ ನ್ಯೂಸ್ ಚಾನೆಲ್ ವರದಿ ತಿಳಿಸಿದೆ.
ಮಿಂಗೋರಾದ ರಸ್ತೆಗಳಲ್ಲಿ ಸ್ಫೋಟಕಗಳನ್ನು ಇರಿಸುತ್ತಿದ್ದಾರೆ ಎಂದು ಆಜ್ ನ್ಯೂಸ್ ಚಾನೆಲ್ ವರದಿ ಹೇಳಿದೆ. ಅಷ್ಟೇ ಅಲ್ಲದೇ ಮಿಂಗೋರಾ ಪೊಲೀಸ್ ಠಾಣೆಯ ಸುತ್ತ ತಾಲಿಬಾನ್ ಪಡೆ ಸುತ್ತುವರಿದಿದೆ. ಆ ನಿಟ್ಟಿನಲ್ಲಿ ಸರ್ಕ್ಯೂಟ್ ಹೌಸ್ ಹಾಗೂ ಪವರ್ ಸ್ಟೇಶನ್‌ಗೆ 46ಮಂದಿ ರಕ್ಷಣಾ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಅವರನ್ನೂ ಕೂಡ ತಾಲಿಬಾನ್ ಟಾರ್ಗೆಟ್ ಮಾಡಿದ್ದು, ಶರಣಾಗತರಾಗುವಂತೆ ಸೂಚಿಸಿದೆ ಎಂದು ಟಿವಿ ವರದಿಯೊಂದು ತಿಳಿಸಿದೆ.
ಸ್ವಾತ್ ಪ್ರದೇಶದಲ್ಲಿನ ಪರಿಸ್ಥಿತಿ ಬಿಗುವಿನ ಕೂಡಿರುವ ಪರಿಣಾಮ ಇಲ್ಲಿನ ನಾಗರಿಕರು ಆದಷ್ಟು ಶೀಘ್ರ ಮಿಂಗೋರಾವನ್ನು ತ್ಯಜಿಸುವಂತೆ ಸ್ವಾತ್ ಪ್ರದೇಶದ ಸಿವಿಲ್ ಅಡ್ಮಿನಿಸ್ಟ್ರೇಶನ್ ಅಧಿಕಾರಿ ಖುಶಾಲ್ ಖಾನ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. |