ವಾಣಿಜ್ಯ ನಗರಿಯ ಮೇಲೆ ಕಳೆದ ವರ್ಷ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಲಷ್ಕರ್ ಇ ತೊಯ್ಬಾದ ಕಮಾಂಡರ್ ಲಕ್ವಿ ಸೇರಿದಂತೆ ಐದು ಮಂದಿ ವಿರುದ್ಧ ಪಾಕಿಸ್ತಾನ ಪೊಲೀಸರು ಮಂಗಳವಾರ ಭಯೋತ್ಪಾದನಾ ನಿಗ್ರಹ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಲಷ್ಕರ್ ಇ ತೊಯ್ಬಾದ ಜಾಕೀರ್ ರೆಹಮಾನ್ ಲಕ್ವಿ ಸೇರಿದಂತೆ ಐದು ಮಂದಿ ವಿರುದ್ಧ ಪಾಕ್ ಪೊಲೀಸರು ಇಂದು ಭಯೋತ್ಪಾದನಾ ನಿಗ್ರಹ ಕೋರ್ಟ್‌ನ ನ್ಯಾಯಾಧೀಶ ಸಾಖಿ ಮುಹಮ್ಮದ್ ಕೌತ್ ಅವರಿಗೆ ದೂರುಪಟ್ಟಿ ಸಲ್ಲಿಸಿದ್ದು, ಕೊನೆಗೂ ಭಾರತದ ಒತ್ತಡಕ್ಕೆ ಪಾಕ್ ಮಣಿಯುಂತಾಗಿದೆ.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ಕಮಾಂಡರ್ ಜಾಕೀರ್ ರೆಹಮಾನ್ ಲಕ್ವಿ, ಜರಾರ್ ಷಾ, ಹಮಾದ್ ಅಮಿನ್ ಸಿದ್ದಿಕಿ, ಅಬು ಅಲ್ ಖ್ವಾಮಾ ಮತ್ತು ಶಾಹೀದ್ ಜಮಲ್ ರಿಯಾಜ್‌ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇಡಲಾಗಿದೆ.
ಬಿಗಿ ಭದ್ರತೆಯನ್ನೊಳಗೊಂಡ ರಾವಲ್ಪಿಂಡಿ ಅಡಿಯಾಲಾ ಸೆರೆಮನೆಯಲ್ಲಿ ಮೇ 12ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಐದು ಮಂದಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಚಾರ್ಜ್‌ಶೀಟ್ ಹಾಗೂ ಮಹತ್ವದ ದಾಖಲೆಗಳನ್ನು ಸಲ್ಲಿಸಲಾಗಿದೆ. |