ಜಮಾತ್ ಉದ್ ದಾವಾ ಸಂಘಟನೆಯ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್ ಗೃಹ ಬಂಧನವನ್ನು ಮತ್ತೆ ಎರಡು ತಿಂಗಳ ಕಾಲಾವಧಿಯನ್ನು ಪಾಕಿಸ್ತಾನ ಕೋರ್ಟ್ ಮಂಗಳವಾರ ವಿಸ್ತರಿಸಿದ್ದು, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹಫೀಜ್ ನಿಕಟವರ್ತಿ ಹಾಗೂ ಮತ್ತೊಬ್ಬ ಉಗ್ರ ಮುಖಂಡರನ್ನು ನ್ಯಾಯಾಲಯ ಬಂಧಮುಕ್ತಗೊಳಿಸಿದೆ.
ಲಾಹೋರ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ನಾಜಾಮುಜ್ ಝಮಾನ್ ಅವರು, ಸಯೀದ್ ಹಾಗೂ ನಿವೃತ್ತ ಕರ್ನಲ್ ನಜೀರ್ ಅಹ್ಮದ್ ಅವರ ಗೃಹಬಂಧನವನ್ನು 60ದಿನಗಳ ಕಾಲಾವಧಿಗೆ ವಿಸ್ತರಿಸಿ ಆದೇಶ ನೀಡಿದ್ದಾರೆ.
ಅಲ್ಲದೇ ನ್ಯಾಯಾಲಯ ಜಮಾತ್ ಉದ್ ದಾವಾ ಮುಖಂಡರಾದ ಅಮಿರ್ ಹಮ್ಜಾ ಮತ್ತು ಮುಫ್ತಿ ಅಬ್ದುರ್ ರೆಹಮಾನ್‌ನನ್ನು ಬಂಧಮುಕ್ತಗೊಳಿಸಿದೆ. ಈ ಮೊದಲು ಇನ್ ಕ್ಯಾಮರಾ ವಿಚಾರಣೆ ಸಂದರ್ಭದಲ್ಲಿ ನಾಲ್ಕು ಉಗ್ರ ಮುಖಂಡರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿತ್ತು.
ಜಮಾತ್ ಹಾಗೂ ನಿಷೇಧಿತ ಲಷ್ಕರ್ ಇ ತೊಯ್ಬಾದ ಸಂಸ್ಥಾಪಕ ಸಯೀದ್ ವಿಚಾರಣೆ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಗೃಹಬಂಧನದ ಕಾಲಾವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ, ಹಾಗೆ ಮುಂದುವರಿಸಿದರೆ ಅದು ಸಂವಿಧಾನ ಬಾಹಿರ ಹಾಗೂ ಅದು ಕಾನೂನು ಸಮ್ಮತವಾದುದಲ್ಲ ಎಂಬುದಾಗಿ ನ್ಯಾಯಪೀಠದ ವಿಚಾರಣೆ ವೇಳೆ ಕೇಳಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದ.
ಕಳೆದ ಐದು ತಿಂಗಳಿನಿಂದ ಸರ್ಕಾರ ನಮ್ಮನ್ನು ಯಾವ ಕಾಯ್ದೆಯಡಿಯಲ್ಲಿ ಬಂಧಿಸಿದೆ. ಜೆಯುಡಿಯನ್ನು ಅಮೆರಿಕ ಮಾತ್ರ ನಿಷೇಧಿಸಿದೆ. ನಮ್ಮ ಸಂಘಟನೆ ಮುಂಬೈ ದಾಳಿಯಲ್ಲಿ ಭಾಗಿ ಎಂಬುದಕ್ಕೆ ಸರ್ಕಾರದ ಬಳಿ ಯಾವುದಾದರು ಪುರಾವೆ ಇದೆಯೇ ಎಂಬುದು ಸಯೀದ್ ಪ್ರಶ್ನಿಸಿದ್ದಾನೆ. |