ಪಾಕಿಸ್ತಾನದ ವಾಯುವ್ಯ ಭಾಗದ ಸ್ವಾತ್ ಕಣಿವೆ ಪ್ರದೇಶದಲ್ಲಿ ಪಾಕ್ ಮಿಲಿಟರಿ ಮತ್ತು ತಾಲಿಬಾನ್ ಉಗ್ರರ ನಡುವೆ ಘರ್ಷಣೆ ನಡೆಯುತ್ತಿರುವ ಪರಿಣಾಮ, ಆತಂತಕ್ಕೆ ಒಳಗಾಗಿರುವ ಸುಮಾರು 40ಸಾವಿರ ನಾಗರಿಕರು ಕಣಿವೆಯನ್ನು ತೊರೆದಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಾಲಿಬಾನ್ ಹಿಡಿತದಿಂದ ನಲುಗಿಹೋಗಿದ್ದ ಮಿಂಗೋರಾ ಪ್ರದೇಶದಲ್ಲಿ ಮಿಲಿಟರಿ ಮತ್ತು ತಾಲಿಬಾನ್ ನಡುವೆ ನೂತನ ಘರ್ಷಣೆ ಜನರನ್ನು ಭೀತಿಯ ಮಡಿಲಿಗೆ ದೂಡಿದೆ. ಇದರಿಂದಾಗಿ ಮಂಗಳವಾರ ಮಿಂಗೋರಾದಿಂದ ಅಂದಾಜು 40ಸಾವಿರ ಜನರು ಸ್ಥಳಾಂತರಗೊಂಡಿರುವುದಾಗಿ ಸ್ವಾತ್ ಕಣಿವೆ ಮುಖ್ಯ ಆಡಳಿತಾಧಿಕಾರಿ ಖುಶ್ಸಾಲ್ ಖಾನ್ ಹೇಳಿದ್ದಾರೆ.
ಘರ್ಷಣೆಯ ಹಿನ್ನೆಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸ್ವಾತ್, ಮಿಂಗೋರಾ ಪ್ರದೇಶವನ್ನು ತೊರೆಯುತ್ತಿರುವುದಾಗಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.
ಸ್ವಾತ್ ಪ್ರದೇಶದಾದ್ಯಂತ ತಾಲಿಬಾನ್ ಮತ್ತು ಸೈನಿಕರ ನಡುವೆ ಘರ್ಷಣೆ ಮುಂದುವರಿದ ಸಂದರ್ಭದಲ್ಲಿ ತಪ್ಪು ಸಂದೇಶಗಳು ಜನರನ್ನು ಮತ್ತಷ್ಟು ಗಾಬರಿ ಹೆಚ್ಚಿಸುವಂತೆ ಮಾಡಿತ್ತು. ಆದರೆ ಅಧಿಕಾರಿಗಳ ಸ್ಪಷ್ಟ ಸೂಚನೆಯ ನಂತರ ಜನರು ಪ್ರದೇಶವನ್ನು ತೊರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. |