ಪಾಕಿಸ್ತಾನ ಹೊಂದಿರುವ ಪರಮಾಣು ಶಸ್ತ್ರಾಸ್ತ್ರ ತಾಲಿಬಾನ್ ಕೈವಶವಾಗುವ ಸಾಧ್ಯತೆ ಇದೆ ಎಂಬ ಅಮೆರಿಕದ ಆರೋಪವನ್ನು ತಳ್ಳಿಹಾಕಿರುವ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪರಮಾಣು ಶಸ್ತ್ರಾಸ್ತ್ರ ಸುರಕ್ಷಿತರ ಕೈಯಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿನ ಪರಮಾಣು ಆಯುಧಗಳು ಸುರಕ್ಷಿತರ ಕೈಯಲ್ಲಿದೆ ಎಂದು ಜರ್ದಾರಿ ಸಂದರ್ಶನವೊಂದರಲ್ಲಿ ಮಾತನಾಡುತ್ತ ಹೇಳಿದರು. ಪಾಕಿಸ್ತಾನದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ತಾಲಿಬಾನ್ ಕೈವಶವಾಗುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಆರೋಪಿಸಿ ನ್ಯೂಯಾರ್ಕ್ ಟೈಮ್ಸ್‌ಗೆ ಕಳೆದ ಎರಡು ದಿನಗಳ ಹಿಂದೆ ಅಮೆರಿಕದ ಅಧಿಕಾರಿಗಳು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಜರ್ದಾರಿ ಸ್ಪಷ್ಟನೆ ಹೊರಬಿದ್ದಿದೆ.
ಪಾಕ್ ಯಾವುದೇ ಕಾರಣಕ್ಕೂ ತಾಲಿಬಾನ್ ಹಿಡಿತಕ್ಕೆ ಬರುವ ಪ್ರಮೇಯ ಇಲ್ಲ ಎಂದು ಪ್ರತಿಪಾದಿಸಿದ ಅವರು, ನಮ್ಮಲ್ಲಿ 700,000 ಆರ್ಮಿ ಸಿಬ್ಬಂದಿಗಳಿದ್ದಾರೆ. ಆ ನಿಟ್ಟಿನಲ್ಲಿ ಉಗ್ರರು ಹೇಗೆ ಯಾವುದೇ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ತಾಲಿಬಾನ್ ಉಗ್ರರ ಬಗ್ಗೆ ಪಾಕ್ ಸಹಾನುಭೂತಿ ಹೊಂದಿದೆ ಎಂಬ ವಾದದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಜರ್ದಾರಿ, ಕೆಲವು ಪ್ರದೇಶದಲ್ಲಿ ತಾಲಿಬಾನ್ ಬಗ್ಗೆ ಜನರು ಅನುಕಂಪ ಹೊಂದಿರುವುದು ಧರ್ಮ, ದೇವರುಗಳ ಭಾವನೆಗಳಿಂದಾಗಿ ಹೊರತು ಬೇರೇನೂ ಅಲ್ಲ. ಆದರೆ ದೇಶದ ಪರಮಾಣು ಶಸ್ತ್ರಾಸ್ತ್ರ ಆಗಲಿ ಯಾವುದೇ ಆಯುಧ ಉಗ್ರರ ಕೈವಶವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. |