ನೇಪಾಳದ ಆಡಳಿತಾರೂಢ ಮಾವೋವಾದಿ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಬಿಗಡಾಯಿಸಿರುವ ಸಂದರ್ಭ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಚಂಡ ಅವರು ವಿಶ್ವಸಂಸ್ಥೆಯಿಂದ ಹೆಚ್ಚು ಹಣ ಪಡೆಯಲು ಸುಳ್ಳು ಹೇಳಿರುವ ಪ್ರಕರಣ ಬೆಳಕಿಗೆ ಬಂದಿದೆ.ಕಳೆದ ಜನವರಿ ತಿಂಗಳಲ್ಲಿ ಕಾಠ್ಮಂಡುವಿನಿಂದ ಹೊರಭಾಗದಲ್ಲಿರುವ ಚಿತ್ವಾನ್‌ನಲ್ಲಿ ಮಾವೋವಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ ಪ್ರಚಂಡ ಅವರು ನೇಪಾಳದಲ್ಲಿ 35,000 ಮಾವೋವಾದಿಗಳು ಇದ್ದಾರೆ ಎಂದು ಹೇಳಿದ್ದರು.ಸುಮಾರು ಏಳು ಸಾವಿರ ಮಂದಿಯಿದ್ದ ಮಾವೋವಾದಿಗಳು ಇದೀಗ ಹೆಚ್ಚು ಶಕ್ತಿಯುತರಾಗಿದ್ದು, ಆ ಸಂಖ್ಯೆ 35 ಸಾವಿರಕ್ಕೇರಿದೆ ಎಂದು ಪ್ರಚಂಡ ಅವರು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.ವಿಶ್ವಸಂಸ್ಥೆ ಅಂದಾಜಿನ ಪ್ರಕಾರ 20,000 ಮಾವೋವಾದಿಗಳು ನೇಪಾಳದಲ್ಲಿದ್ದು, ಇದಕ್ಕಾಗಿ ಈ ಸಂಖ್ಯೆಗೆ ಅನುಗುಣವಾಗಿ 6 ಲಕ್ಷ ರೂಪಾಯಿಗಳ ಬಿಡುಗಡೆಗೆ ನಿಗದಿ ಮಾಡಲಾಗಿತ್ತು. ಹೆಚ್ಚು ಸಂಖ್ಯೆಯನ್ನು ಹೇಳುವ ಮೂಲಕ ವಿಶ್ವಸಂಸ್ಥೆಯ ಮಂಜೂರಾತಿ ಹಣವನ್ನು ಕಬಳಿಸುವ ಹುನ್ನಾರ ಎಂದು ಈಗ ಪ್ರಚಂಡ ಅವರ ಸುಳ್ಳನ್ನು ಬಿಂಬಿಸಲಾಗಿದೆ.ಅಲ್ಲದೆ ವಿಡಿಯೋ ದಾಖಲೆಗಳ ಪ್ರಕಾರ, ಪ್ರಚಂಡ ಅವರು ಮಾವೋವಾದಿಗಳ ಕೃಪಾಕಟಾಕ್ಷ ತನ್ನ ಮೇಲೆ ಸದಾ ಇರಲು ಈ ತಂತ್ರ ಬಳಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತದೆ. ಜನತೆಯ ಮೂಲಕ ಬಂಡಾಯ ಎಬ್ಬಿಸಲೂ ತಯಾರಿರುವ ಮಾವೋವಾದಿಗಳು, ತಮಗೆ ವರವಾಗುವುದಿಲ್ಲ ಎಂದಾದರೆ ಚುನಾವಣೆಗೆ ನಡೆಯದಿರಲು ಯಾವತ್ತೂ ಅವಕಾಶ ನೀಡುವುದಿಲ್ಲ. ಈಗಾಗಲೇ ಸರ್ವಪಕ್ಷ ಸಭೆಯನ್ನೂ ಸಾಮೂಹಿಕವಾಗಿ ಬಹಿಷ್ಕರಿಸಿ ಹೊರನಡೆದಿರುವ ಮಾವೋವಾದಿಗಳು ಸಂಸತ್ತಿನ ಕಲಾಪಕ್ಕೂ ಅಡ್ಡಿಪಡಿಸಿದ್ದರು.ಇದೇ ಸಂದರ್ಭ ನೇಪಾಳದ ಸುಪ್ರೀಂಕೋರ್ಟ್‌ನಲ್ಲಿ ನೇಪಾಳ ಸೇನಾ ವರಿಷ್ಠ ರುಗ್ಮಾಂಗದ್ ಕಾಟಾವಾಲ್ ಅವರನ್ನು ಪ್ರಧಾನಿ ಪ್ರಚಂಡ ಅವರು ಪದವಿಯಿಂದ ವಜಾಗೊಳಿಸಿರುವ ಪ್ರಕರಣ ಹಾಗೂ, ಈ ಸಂಬಂಧ ವಜಾ ಕ್ರಮವನ್ನು ತಿರಸ್ಕರಿಸಿರುವ ಅಧ್ಯಕ್ಷ ರಾಮ್ ಬರಾನ್ ಯಾದವ್, ಕಾಟಾವಾಲ್ ಸೇನಾ ವರಿಷ್ಠಾರಾಗಿ ಮುಂದುವರಿಯುಂತೆ ಆದೇಶ ನೀಡಿದ್ದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ವಿಚಾರಣೆಯಲ್ಲಿ ಮಾವೋವಾದಿಗಳ ಪರವಾಗಿ ತೀರ್ಪು ಹೊರಬಂದರೆ ಮತ್ತೆ ರಾಜಕೀಯ ಕೋಲಾಹಲಗಳು ಕಾಣಬಹುದು. |