ನೇಪಾಳದ ಮಿಲಿಟರಿ ವರಿಷ್ಠ ರುಕ್ಮಾಂಗದ್ ಕಾಟುವಾಲ್ ಅವರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ತಲೆದೋರಿದ ರಾಜಕೀಯ ಬಿಕ್ಕಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಮಾವೋ ನಾಯಕ ಪ್ರಚಂಡ ಬುಧವಾರ ಸಿಪಿಎನ್-ಯುಎಂಎಲ್ ಮುಖಂಡ ಜಾಲಾನಾಥ್ ಖಾನಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನೇಪಾಳ ಮಿಲಿಟರಿ ವರಿಷ್ಠ ಕಾಟುವಾಲ್ ಅವರನ್ನು ಪ್ರಧಾನಿ ಪ್ರಚಂಡ ಸೇವೆಯಿಂದ ವಜಾಗೊಳಿಸಿದ ಪರಿಣಾಮ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆದಿತ್ತು. ಅಲ್ಲದೇ ಪ್ರಚಂಡ ಅವರ ಕ್ರಮ ಕಾನೂನು ಬಾಹಿರ ಎಂದು ತಿಳಿಸಿ ಅಧ್ಯಕ್ಷ ಯಾದವ್ ಅವರನ್ನು ಪುನರ್ ನೇಮಕಕ್ಕೆ ಆದೇಶ ನೀಡಿದ್ದರು.
ಇದರಿಂದ ಕುಪಿತಗೊಂಡ ಪ್ರಧಾನಿ ಪ್ರಚಂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತೀವ್ರ ತೆರನಾದ ರಾಜಕೀಯ ಬಿಕ್ಕಟ್ಟ ತಲೆದೋರಿದ್ದು, ನೂತನ ಸರ್ಕಾರ ರಚನೆಗಾಗಿ ಕಸರತ್ತು ಆರಂಭಗೊಂಡಿತ್ತು.
ಇಂದು ಖಾನಾಲ್ಸ್ ಅವರ ನಿವಾಸಕ್ಕೆ ಪ್ರಚಂಡ ಭೇಟಿ ಮಾಡಿ, ಮಿಲಿಟರಿ ವರಿಷ್ಠ ಕಾಟಾವಲ್ ಅವರನ್ನು ವಜಾಗೊಳಿಸಿರುವ ಕ್ರಮದ ಬಗ್ಗೆ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದ್ದಾರೆ.
ಸದ್ಯದ ರಾಜಯಕೀಯ ಬಿಕ್ಕಟ್ಟು ಪರಿಸ್ಥಿತಿಯನ್ನು ರಾಷ್ಟ್ರದ ಹಿತದೃಷ್ಟಿಯಿಂದ ಒಮ್ಮತಾಭಿಪ್ರಾಯದಿಂದ ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ಯುಎಂಎಲ್ ಮೂಲಗಳು ಹೇಳಿವೆ. ನಮ್ಮ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ಮುಂದುವರಿಸಲು ನಾವು ಸಿದ್ದರಿರುವುದಾಗಿ ಯುಎಂಎಲ್ ಅಭಿಪ್ರಾಯ ವ್ಯಕ್ತಪಡಿಸಿದೆ. |