ನೇಪಾಳ ಪ್ರಧಾನಿ ಪ್ರಚಂಡ ರಾಜೀನಾಮೆಯೊಂದಿಗೆ ದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಬುಧವಾರ ಮಾವೋವಾದಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರೊಂದಿಗೆ ಘರ್ಷಣೆ ಇಳಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಪ್ರಧಾನಿ ಪ್ರಚಂಡ ಅವರು ಭಾನುವಾರ ಸೇನಾ ವರಿಷ್ಠ ಕಾಟಾವಲ್ ಅವರನ್ನು ವಜಾಗೊಳಿಸಿದ ಕ್ರಮಕ್ಕೆ ತಡೆ ನೀಡಿ ಪುನರ್ ನೇಮಕ್ಕೆ ಆದೇಶ ನೀಡಿದ ನಂತರ ದೇಶದಲ್ಲಿ ಮಾವೋವಾದಿಗಳು ತೀವ್ರ ಪ್ರತಿಭಟನೆ ನಡೆಸುವ ಮೂಲಕ ಘರ್ಷಣೆಗೆ ಕಾರಣವಾಗಿದೆ.
ಪುಷ್ಪ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಮಾವೋವಾದಿ ಗೆರಿಲ್ಲಾ ಮಾಜಿ ನಾಯಕ ದಶಕಗಳ ಕಾಲ ಶಸ್ತ್ರಾಸ್ತ್ರ ಹೋರಾಟದ ಬಳಿಕ ನೇಪಾಳದ ಅಧಿಕಾರದ ಗದ್ದುಗೆ ಏರುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದರು. ಆದರೆ ತಾನು ಕೈಗೊಂಡ ನಿರ್ಧಾರಕ್ಕೆ ಅಧ್ಯಕ್ಷ ಯಾದವ್ ಅವರು ವಿರುದ್ಧ ನಿರ್ಧಾರ ಕೈಗೊಂಡಿದ್ದನ್ನು ಪ್ರತಿಭಟಿಸಿ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬುಧವಾರ ಕಮ್ಯುನಿಷ್ಟ್ ಪಾರ್ಟಿ ಆಫ್(ಮಾವೋವಾದಿ) ನೇಪಾಳ ಪಕ್ಷದ ಪ್ರಚಂಡ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದಾಗ ಘರ್ಷಣೆ ಉಂಟಾಗಿತ್ತು. ಆದರೆ ಘರ್ಷಣೆಯಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿರಲಿಲ್ಲ. ಕಾಠ್ಮಂಡುವಿನಲ್ಲಿ ಪ್ರತಿಭಟನೆ ಹಾಗೂ ರಾಲಿ ನಡೆಸುವುದಕ್ಕೆ ಆಡಳಿತಯಂತ್ರ ನಿರ್ಬಂಧ ವಿಧಿಸಿದೆ.
ಪ್ರಧಾನಿ ಪ್ರಚಂಡ ಅವರು ಕೈಗೊಂಡ ನಿರ್ಧಾರದ ಬಗ್ಗೆ ಅಧ್ಯಕ್ಷ ಯಾದವ್ ತಳೆದ ಅಸಂವಿಧಾನಿಕ ಕ್ರಮವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿರುವ ಮಾವೋವಾದಿಗಳು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. |