ತಾಲಿಬಾನ್ ಹಿಡಿತದಲ್ಲಿ ಉಳಿದಿರುವ ಕೆಲವು ಭಾಗಗಳನ್ನು ತಮ್ಮ ಕೈವಶ ಮಾಡಿಕೊಳ್ಳುವತ್ತ ಪಾಕಿಸ್ತಾನ ಸೈನಿಕ ಪಡೆ ಮುನ್ನುಗ್ಗುತ್ತಿದ್ದು, ಬುಧವಾರ ಮುಂದುವರಿದ ಸಮರದಲ್ಲಿ 64ತಾಲಿಬಾನ್ ಉಗ್ರರು ಹತರಾಗಿರುವುದಾಗಿ ಮಿಲಿಟರಿ ಮೂಲಗಳು ತಿಳಿಸಿವೆ.
ಸ್ವಾತ್ ಪ್ರದೇಶದಲ್ಲಿ ಮಿಲಿಟರಿ ಪಡೆ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ನಡೆಯುತ್ತಿರುವ ಕಾಳಗದ ಭಯದಿಂದಾಗಿ ಸಾವಿರಾರು ಮಂದಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ವಲಸೆ ಹೋಗುತ್ತಿದ್ದಾರೆ.
ಮಿಂಗೋರಾ ಪ್ರದೇಶದಾದ್ಯಂತ ಶಸ್ತ್ರ ಸಜ್ಜಿತ ತಾಲಿಬಾನಿಗಳ ಮೇಲೆ ಆರ್ಮಿ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸುವ ಮೂಲಕ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಮುಖ ನಗರದಲ್ಲಿ ಸರ್ಕಾರಿ ಕಟ್ಟಡಗಳನ್ನು ಉಗ್ರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪ್ರಮುಖ ದ್ವಾರಗಳಲ್ಲಿ ನೆಲಬಾಂಬ್‌ಗಳನ್ನು ಅಳವಡಿಸಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಪ್ರೊವಿನ್ಸಿಯಲ್ ಸರ್ಕಾರದೊಂದಿಗೆ ತಾಲಿಬಾನ್ ಮಾಡಿಕೊಂಡ ಶಾಂತಿ ಒಪ್ಪಂದ ಮುರಿದುಬಿದ್ದಂತಾಗಿದೆ. ಘರ್ಷಣೆ ಹೆಚ್ಚುತ್ತಿದ್ದಂತೆಯೇ ನಾಗರಿಕರಲ್ಲಿ ಆತಂಕ ಇಮ್ಮಡಿಯಾಗತೊಡಗಿದ್ದು, ಕಣಿವೆ ಪ್ರದೇಶ ತೊರೆಯುವಂತಾಗಿದೆ. |