ಎರಡು ದೇಶಗಳಿಗೂ ರಕ್ಷಣೆಯ ಹಿತದೃಷ್ಟಿಯಿಂದಾಗಿ ಉಗ್ರರನ್ನು ದಮನ ಮಾಡುವ ನಿಟ್ಟಿನಲ್ಲಿ ಅಮೆರಿಕದ ಬೆಂಬಲದೊಂದಿಗೆ ಪಾಕಿಸ್ತಾನ ಮತ್ತು ಅಫ್ಘಾನ್‌ನ ಜಂಟಿ ಕಾರ್ಯಾಚರಣೆ ಪಡೆ ರಚಿಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವಾಗ್ದಾನ ನೀಡಿದ್ದಾರೆ.
ಅಘ್ಘಾನ್ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರು ಅಟ್ಟಹಾಸ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗೂ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಬುಧವಾರ ಶ್ವೇತಭವನದಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆ ಬಳಿಕ ಒಬಾಮ ಮಾತನಾಡುತ್ತ ತಿಳಿಸಿದರು.
ನಮ್ಮ ಹೋರಾಟ ಮೂಲಭೂತವಾದಿಗಳ ವಿರುದ್ಧವಾಗಿದೆ ಎಂದು ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಅಮೆರಿಕದ ಸೈನಿಕ ಪಡೆಗಳ ಜಂಟಿ ಪಡೆಯೊಂದಿಗೆ ಕಾರ್ಯಾಚರಣೆ ನಡೆಯಲಿದೆ ಎಂದು ಒಬಾಮಾ ಕರ್ಜಾಯ್ ಮತ್ತು ಜರ್ದಾರಿಗೆ ಮನವರಿಕೆ ಮಾಡಿದರು.
ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಅಂಗವಾಗಿ ಒಬಾಮಾ ಇಬ್ಬರು ಮುಖಂಡರನ್ನು ಶ್ವೇತಭವನಕ್ಕೆ ಆಹ್ವಾನಿಸಿದ್ದರು. |