ಇರಾಕಿನ ರಾಜಧಾನಿ ಬಾಗ್ದಾದಿನ ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಜನರು ಬಲಿಯಾಗಿದ್ದಾರೆ. ಸುನ್ನಿಗಳ ಬಾಹುಳ್ಯದ ದೋರಾ ಜಿಲ್ಲೆಯಲ್ಲಿ ಸಂಭವಿಸಿದ ದಾಳಿಯಲ್ಲಿ 30ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ಕಾಲಮಾನ 7 ಗಂಟೆಗೆ ಈ ಸ್ಫೋಟ ಸಂಭವಿಸಿದೆಯೆಂದು ಒಳಾಡಳಿತ ಸಚಿವಾಲಯ ತಿಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಮಾರಕ ಬಾಂಬ್ ದಾಳಿಗಳ ಸರಣಿಗೆ ಏಪ್ರಿಲ್ ತಿಂಗಳಲ್ಲಿ 355 ಇರಾಕಿಗಳು ಬಲಿಯಾಗಿದ್ದು, ಈ ವರ್ಷದ ರಕ್ತದೋಕುಳಿಯ ತಿಂಗಳಾಗಿದೆ.
ಮಾರುಕಟ್ಟೆಯಲ್ಲಿ ಕಗ್ಗೊಲೆ ಸಂಭವಿಸಿದ ಕೆಲವೇ ಗಂಟೆಗಳ ಬಳಿಕ ಕರಾಡಾದಲ್ಲಿ ಕಾರ್ ಬಾಂಬ್ ದಾಳಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, 7ಮಂದಿ ಗಾಯಗೊಂಡಿದ್ದಾರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕಿನ ಪಟ್ಟಣ ಪ್ರದೇಶಗಳಿಂದ ಅಮೆರಿಕದ ಪಡೆಗಳ ಹಿಂತೆಗೆತಕ್ಕೆ ಜೂನ್ 30 ಗಡುವಿಗೆ ಕೆಲವೇ ವಾರಗಳ ಮುಂಚೆ ಹಿಂಸಾಚಾರ ಹೆಚ್ಚಳ ಉಂಟಾಗಿದೆ. |