ಮಿಲಿಟರಿ ಕ್ರಾಂತಿಯ ಕತ್ತಿ ತಲೆಯ ಮೇಲೆ ಸದಾ ತೂಗುವ, ದುರ್ಬಲ ಪ್ರಜಾಪ್ರಭುತ್ವದ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನೆಲೆ ಗಟ್ಟಿಗೊಳಿಸುವುದಕ್ಕೆ ತಮ್ಮ ಆಡಳಿತ ಒಲವು ವ್ಯಕ್ತಪಡಿಸಿದೆಯೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಇಂಗಿತ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಸಂಸ್ಥಗಳಿಗೆ ನಿರಂತರ ಬೆಂಬಲ ನೀಡುವ ಮೂಲಕ, ಪಾಕಿಸ್ತಾನಕ್ಕೆ ಬೆದರಿಕೆಯಾಗಿರುವ ಉಗ್ರರ ಜತೆ ಸಂಘರ್ಷದ ಸಲುವಾಗಿ ಸರ್ಕಾರಕ್ಕೆ ನೆರವು ನೀಡಬೇಕು ಎಂದು ಪಾಕಿಸ್ತಾನದ ಸಹವರ್ತಿ ಅಸೀಫ್ ಅಲಿ ಜರ್ದಾರಿ ಮತ್ತು ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ತ್ರಿಪಕ್ಷೀಯ ಶೃಂಗಸಭೆಯ ನೇಪಥ್ಯದಲ್ಲಿ ಭೇಟಿ ಮಾಡಿದ ಬಳಿಕ ಒಬಾಮಾ ಹೇಳಿದ್ದಾರೆ. 'ಪಾಕಿಸ್ತಾನ ನಾಶಕ್ಕೆ ಹುನ್ನಾರ ಮಾಡುವ ಶಕ್ತಿಗಳ ವಿರುದ್ಧ ನಾವು ಸೆಣೆಸಬೇಕು.
ಪಾಕಿಸ್ತಾನದ ಮರುನಿರ್ಮಾಣಕ್ಕೆ ಇಚ್ಥಿಸುವ ಜನರಿಗೆ ನಾವು ಬೆಂಬಲವಾಗಿ ನಿಲ್ಲಬೇಕು' ಎಂದು ಶ್ವೇತಭವನದಲ್ಲಿ ಅಕ್ಕಪಕ್ಕದಲ್ಲೇ ನಿಂತಿದ್ದ ಜರ್ದಾರಿ ಮತ್ತು ಕರ್ಜೈ ಅವರಿಗೆ ಒಬಾಮಾ ಹೇಳಿದರು. ಶಾಲೆಗಳು, ರಸ್ತೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೆ ಸುಸ್ಥಿರ ನಿಧಿಯನ್ನು ಒದಗಿಸುವಂತೆ ತಾವು ಕಾಂಗ್ರೆಸ್ಸಿಗೆ ಸೂಚಿಸಿರುವೆ. ಅಮೆರಿಕ ಕೇವಲ ಭಯೋತ್ಪಾದನೆಗೆ ಸೆಡ್ಡುಹೊಡೆದಿಲ್ಲ. ಪಾಕ್ ಪ್ರಜೆಗಳ ಆಶೋತ್ತರಗಳು ಮತ್ತು ಆಶಯಗಳಿಗೆ ಬೆಂಬಲವಾಗಿ ನಿಂತಿದ್ದೇವೆಂದು ಪಾಕಿಸ್ತಾನದ ಜನತೆ ಅರ್ಥಮಾಡಿಕೊಳ್ಳಬೇಕು. ಪಾಕಿಸ್ತಾನದ ಭವಿಷ್ಯವು ಅಲ್ಲಿನ ಜನರ ಪ್ರತಿಭೆ, ಬುದ್ಧಿಮತ್ತೆ ಮತ್ತು ಶೋಧನೆಯ ಮೇಲೆ ನಿಂತಿದೆಯೆನ್ನುವುದು ತಮಗೆ ಗೊತ್ತಿದೆ ಎಂದು ಒಬಾಮಾ ಹೇಳಿದರು. |