ಇರಾಕಿನಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರುವುದು ಬೇಡವೆಂದು ವಿಶ್ವಸಂಸ್ಥೆ ಮಾನವಹಕ್ಕು ಸಂರಕ್ಷಣೆ ಕಚೇರಿಯು ಇರಾಕಿಗೆ ಒತ್ತಾಯಿಸಿದ್ದು, ರಾಷ್ಟ್ರದ ಕೋರ್ಟ್‌ಗಳಲ್ಲಿ ನ್ಯಾಯಯುತ ವಿಚಾರಣೆ ನಡೆಸುವ ಬಗ್ಗೆ ಖಾತರಿಯಿಲ್ಲ ಎಂದು ತಿಳಿಸಿದೆ.
ಭಾನುವಾರ 12 ಇರಾಕಿಗಳನ್ನು ನೇಣುಗಂಬದ ಶಿಕ್ಷೆಗೆ ಗುರಿಮಾಡಿದ ಬಳಿಕ ಮಾನವ ಹಕ್ಕು ಸಂಘಟನೆ ಮೇಲಿನ ಕರೆ ನೀಡಿದೆ. ಮುಂಚಿನ 18 ತಿಂಗಳುಗಳಲ್ಲಿ ಯಾವುದೇ ಮರಣದಂಡನೆ ಶಿಕ್ಷೆ ಜಾರಿ ಮಾಡಿರಲಿಲ್ಲ. ಚಿತ್ರಹಿಂಸೆಯ ಮೂಲಕ ಸಂಗ್ರಹಿಸಿದ ಸಾಕ್ಷ್ಯಾಧಾರಗಳನ್ನು ಮರಣದಂಡನೆ ಶಿಕ್ಷೆಗೆ ಬಳಸಲಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದ್ದು, ಇನ್ನೂ ಅನೇಕ ಮರಣದಂಡನೆಗಳು ಬಾಕಿವುಳಿದಿವೆಯೆಂದು ಅದು ತಿಳಿಸಿದೆ.
ಆದರೆ ವಿಶ್ವಸಂಸ್ಥೆಯ ವರದಿಯ ಬಗ್ಗೆ ಇರಾಕಿನ ಸರ್ಕಾರ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಒಂದೂವರೆ ವರ್ಷಗಳ ಕಾಲ ರದ್ದಾಗಿದ್ದ ಮರಣದಂಡನೆ ಪುನಃ ಆರಂಭವಾಗಿದ್ದು ವಿಷಾದದ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳ ವಿಶ್ವಸಂಸ್ಥೆ ಹೈಕಮೀಷನರ್ ಮತ್ತು ಬಾಗ್ದಾದ್‌ನಲ್ಲಿರುವ ವಿಶ್ವಸಂಸ್ಥೆ ರಾಯಭಾರ ಕಚೇರಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಭವಿಷ್ಯದಲ್ಲಿ ಇನ್ನೂ 115 ಕೈದಿಗಳು ಮರಣದಂಡನೆಗೆ ಗುರಿಯಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಕಚೇರಿ ಶಂಕಿಸಿದೆ. ಚಿತ್ರಹಿಂಸೆ ಅಥವಾ ಒತ್ತಡದ ಮೂಲಕ ಸಂಗ್ರಹಿಸುವ ಸಾಕ್ಷ್ಯಾಧಾರಗಳು ಮತ್ತು ತಪ್ಪೊಪ್ಪಿಗೆಗಳ ನಿಷೇಧವನ್ನು ಇರಾಕಿನಲ್ಲಿ ಆಗಾಗ್ಗೆ ಉಲ್ಲಂಘಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿಕೆ ತಿಳಿಸಿದೆ.ಇಂತಹ ವಿಚಾರಣೆಗಳ ಬಳಿಕ ಜಾರಿಗೆ ತರುವ ಮರಣದಂಡನೆಯು ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತದೆಂದು ಅದು ತಿಳಿಸಿದೆ. |