ನೇಪಾಳದಲ್ಲಿ ರಾಜಕೀಯ ಪರಿಸ್ಥಿತಿ ಅಷ್ಟು ಸುಲಭದಲ್ಲಿ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. ಜತೆಗೆ ಮಾವೋವಾದಿಗಳ ಮುಖಂಡ ಪ್ರಚಂಡ ಅವರು ನೇಪಾಳಯ ಯಾವುದೇ ಆಂತರಿಕ ವಿಷಯದಲ್ಲಿ ಇತರ ದೇಶಗಳು ಮೂಗುತೂರಿಸುವುದು ನಮಗೆ ಇಷ್ಟವಾಗುವುದಿಲ್ಲ ಎಂದು ನುಡಿದಿದ್ದಾರೆ.ಕೆಲವೇ ದಿನಗಳ ಹಿಂದೆ, ನೇಪಾಳದ ಸೇನಾ ಮುಖ್ಯಸ್ಥನರನ್ನು ವಜಾಗೊಳಿಸಿದ ಪ್ರಚಂಡರ ಆದೇಶವನ್ನು ತಿರಸ್ಕರಿಸಿದ ನೇಪಾಳದ ಅಧ್ಯಕ್ಷ ರಾಮ್ ಬರಾನ್ ಯಾದವ್ ಅವರ ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಮಾವೋವಾದಿಗಳು ನವದೆಹಲಿಯನ್ನು ಬೊಟ್ಟು ಮಾಡಿದ್ದರು. ಆ ಹೇಳಿಕೆಯ ಬೆನ್ನಲ್ಲೇ ಸೂಕ್ಷ್ಮವಾಗಿ ಪ್ರಚಂಡ ಅವರು ಮತ್ತೆ ಹೊರದೇಶದ ಮೂಗುತೂರಿಸುವಿಕೆಯತ್ತ ಮಾತೆತ್ತಿದ್ದಾರೆ.ಆದರೆ, ಪ್ರಚಂಡ ಅವರ ಸೇನಾ ಮುಖ್ಯಸ್ಥರ ವಜಾ ನಿರ್ಣಯದ ಹಿಂದೆ ಭಾರತದ ಕೈವಾಡ ಇತ್ತು ಎಂಬ ಆರೋಪಕ್ಕೆ ಅವರು ಕಿಡಿಕಿಡಿಯಾದರು. ಅಲ್ಲದೆ, ನಮ್ಮ ಪಕ್ಷ ಯಾವತ್ತೂ ನೇಪಾಳದ ಹೊರಗಿನ ಯಾವುದೇ ದೇಶದ ಮೂಗುತೂರಿಸುವಿಕೆಯನ್ನು ಿಷ್ಟಪಡುವುದೇ ಇಲ್ಲ. ಇನ್ನೆಲ್ಲಿಯ ಕೈವಾಡದ ಮಾತು ಎಂದರು. ಅಲ್ಲದೆ, ಸೇನ ಮುಖ್ಯಸ್ಥರ ಪ್ರಕರಣದ ಹಿಂದೆ ಭಾರತದ ಕೈವಾಡ ಇದೆ ಎಂಬ ನೇಪಾಳಿಗರ ಸಂಶಯದಲ್ಲಿ ಹುರುಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.ಪ್ರಚಂಡ ಅರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡೇ ದಿನದಲ್ಲಿ ಅಧ್ಯಕ್ಷ ರಾಮ್ ಬರಾನ್ ಯಾದವ್ ಸೇನಾ ಮುಖ್ಯಸ್ಥರ ವಜಾ ಆದೇಶವನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದರು. ನಂತರ ರಾಜಕೀಯ ಬಿಕ್ಕಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಮಾವೋ ನಾಯಕ ಪ್ರಚಂಡ ಸಿಪಿಎನ್-ಯುಎಂಎಲ್ ಮುಖಂಡ ಜಾಲಾನಾಥ್ ಖಾನಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.ಈ ಬಗ್ಗೆ ಮಾತನಾಡಿದ ಖಾನಾಲ್, ಎಲ್ಲ ಪಕ್ಷಗಳೂ ಒಮ್ಮತದಿಂದ ರಾಜಕೀಯ ಪರಿಸ್ಥಿತಿ ತಿಳಿಗೊಳಿಸಲು ನಾವು ಸಮಾಲೋಚನೆ ನಡೆಸಿದ್ದೇವೆ. ಈಗಾಗಲೇ ಅಧ್ಯಕ್ಷರು ಸರ್ಕಾರ ರಚಿಸಲು ಪಕ್ಷಗಳನ್ನು ಕರೆದಿದ್ದಾರೆ. ಮುಂದಿನ ದಿನಗಳು ಶಾಂತಿಯುತವಾಗಿಯೇ ಇರಲಿದೆ ಎಂದು ಹೇಳಿದ್ದಾರೆ.ಕೆಲವು ಪಕ್ಷಗಳು ಕೈ ಜೋಡಿಸುತ್ತೇವೆಂಬ ಮಾತನ್ನು ಹೇಳಿವೆ. ಇನ್ನೂ ಆ ಬಗ್ಗೆ ಮಾತುಕತೆ ನಡೆಯುತ್ತಿರುವುದರಿಂದ, ಈಗ ನಿರ್ಧಿಷ್ಟವಾಗಿ ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ರಚಿಸಲು ನಮಗೇನೂ ಗಡಿಬಿಡಿಯಿಲ್ಲ ಎಂದು ಖಾನಾಲ್ ತಿಳಿಸಿದರು.ನೇಪಾಳಿ ಕಾಂಗ್ರೆಸ್ ಹಾಗೂ 22 ಇತರ ರಾಜಕೀಯ ಪಕ್ಷಗಳು ಖಾನಾಲ್ ಅವರಿಗೆ ಸಹಕಾರ ನೀಡುವ ಭರವಸೆ ನೀಡಿವೆ. ಆದರೆ ಎಂಪಿಆರ್‌ಎಫ್ ಬಳಿ 53 ಸೀಟುಗಳಿದ್ದು ಸರ್ಕಾರದ ಕೀಲಿ ಕೈ ಅದರ ಬಳಿಯಿದೆ. ಆದರೆ ಎಂಪಿಆರ್‌ಎಫ್ ಇನ್ನೂ ತನ್ನ ನಿಲುವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆದರೂ ಎಂಪಿಆರ್‌ಎಫ್‌ನ ಮುಖ್ಯಸ್ಥ ಹಾಗೂ ವಿದೇಶೀ ಸಚಿವ ಉಪೇಂದ್ರ ಯಾದವ್, ಯಾರು ಸರ್ಕಾರ ರಚಿಸುತ್ತಿದ್ದರೂ ನಾವು ಬೆಂಬಲ ನೀಡುತ್ತೇವೆ ಎಂದಿದ್ದಾರೆ.ಆದರೆ, ವಿಷಯದ ಗಂಭೀರತೆ ಇರುವುದು ಪ್ರಚಂಡ ಅವರ ನಿಲುವಿನಲ್ಲಿ. ಅಧ್ಯಕ್ಷರು ಸೇನಾ ಮುಖ್ಯಸ್ಥರ ವಜಾ ಆದೇಶದ ತಿರಸ್ಕಾರವನ್ನು ವಾಪಸ್ ತೆಗೆದುಕೊಳ್ಳದಿದ್ದಲ್ಲಿ ಮಾವೋವಾದಿಗಳು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನೂರಾರು ಮಾವೋವಾದಿಗಳು ನೇಪಾಳದ ಬೀದಿಗಳಲ್ಲಿ ಕೆಂಪು ಬಾವುಟಗಳ ಪ್ರದರ್ಶನ ಮಾಡುತ್ತಾ, ಅಧ್ಯಕ್ಷರು ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನಡೆದಿರುವ ಗಲಭೆಯಲ್ಲಿ ಮೂವರು ಪೊಲೀಸರಿಗೆ ಹಾಗೂ ಇಬ್ಬರು ಮಾವೋವಾದಿಗಳಿಗೆ ಗಾಯಗಳಾಗಿವೆ. ಪೊಲೀಸರು ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು ಮಾವೋ ಬಂಡುಕೋರರ ಹೋರಾಟವನ್ನು ತಗ್ಗಿಸಲು ಪ್ರಯತ್ನಿಸುವ ಕಾರ್ಯ ಮುಂದುವರಿದಿದೆ. |