ಪ್ರಖ್ಯಾತ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರ ವಿರುದ್ಧ 44 ಮಿಲಿಯ ಡಾಲರ್ ಪರಿಹಾರಕ್ಕಾಗಿ ದಾವೆ ಹೂಡಿರುವುದಾಗಿ ಜಾಕ್ಸನ್ ಮಾಜಿ ವಕ್ತಾರೆ ಬುಧವಾರ ತಿಳಿಸಿದ್ದು, ಜಾಕ್ಸನ್ ಉದ್ಯೋಗ ಗುತ್ತಿಗೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದ್ದಾರೆ. ಜಾಕ್ಸನ್ ಅವರ ಪ್ರಚಾರಾಧಿಕಾರಿಯಾಗಿ 5 ವರ್ಷಗಳವರೆಗೆ ಕೆಲಸ ಮಾಡಿದ ರೇಮೋನ್ ಬೇನ್ ಪರ ವಕೀಲರು ವಾಷಿಂಗ್ಟನ್ನಿನಲ್ಲಿ ಜಾಕ್ಸನ್ ವಿರುದ್ಧ ಈ ದಾವೆ ಹೂಡಿದ್ದಾರೆ.
ತಮ್ಮ ದೀರ್ಘಾವಧಿಯ ಮಾಲೀಕರ ವಿರುದ್ಧ, ತಾವು ಅತ್ಯಂತ ಅಭಿಮಾನ ಹೊಂದಿದ್ದ ಮೈಕೆಲ್ ಜಾಕ್ಸನ್ ವಿರುದ್ಧ ದಾವೆ ಹೂಡುವುದು ಅತ್ಯಂತ ವಿಷಾದನೀಯವೆನಿಸಿದೆ ಎಂದು ಬೇನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಾಕ್ಸನ್ ಮತ್ತು ತಾವು ಸುದೀರ್ಘ, ಪರಸ್ಪರ ಅನುಕೂಲದ ವ್ಯಾವಹಾರಿಕ ಸಂಬಂಧ ಹೊಂದಿದ್ದೆವು. ದುರದೃಷ್ಟವಶಾತ್, ನಮ್ಮ ಗುತ್ತಿಗೆ ಸಂಬಂಧದ ಹಣಕಾಸು ಕರಾರನ್ನು ಗೌರವಿಸದಿರಲು ಜಾಕ್ಸನ್ ನಿರ್ಧರಿಸಿದರೆಂದು ಅವರು ಹೇಳಿದ್ದಾರೆ.
ನಾಲ್ಕುವರ್ಷಗಳ ಕೆಳಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿಂದ ದೋಷಮುಕ್ತರಾದ ಬಳಿಕ ತಮ್ಮ ವೃತ್ತಿಜೀವನದ ಮರುನಿರ್ಮಾಣಕ್ಕೆ ಜಾಕ್ಸನ್ ಹೆಣಗುತ್ತಿರುವ ನಡುವೆ ಹೊಸ ಕಾನೂನಿನ ವಿವಾದ ಅವರನ್ನು ಸುತ್ತುವರೆದಿದೆ. |