ಉತ್ತರ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಮತ್ತು ಸೇನೆಯ ನಡುವೆ ಸಂಘರ್ಷದಿಂದ ದುಷ್ಪರಿಣಾಮಕ್ಕೆ ಗುರಿಯಾದ ಮಹಿಳೆಯರು ಮತ್ತು ಮಕ್ಕಳಿಗೆ ನೆರವನ್ನು ಚುರುಕುಗೊಳಿಸಲು ವಿಶ್ವಸಂಸ್ಥೆ ಜನಸಂಖ್ಯೆ ನಿಧಿ ನಿರ್ಧರಿಸಿದೆ.
ಪ್ರಸಕ್ತ ಹೋರಾಟದಿಂದ ಸಂತಾನಾಭಿವೃದ್ಧಿಗೆ ಅಡ್ಡಿಯನ್ನು ಎದುರಿಸುತ್ತಿರುವ ಗರ್ಭಿಣಿ ಮಹಿಳೆಯರಿಗೆ ವಿಶೇಷವಾಗಿ ಈ ನಿಧಿಯನ್ನು ಬಳಸಲಾಗುವುದು. ಮಾನವೀಯ ವ್ಯವಹಾರಗಳ ಸಮನ್ವಯದ ವಿಶ್ವಸಂಸ್ಥೆ ಕಚೇರಿ ಪ್ರಕಾರ, ಈಶಾನ್ಯ ತೀರದ ಸಣ್ಣ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಸಿಕ್ಕಿಬಿದ್ದ 196,000 ಜನರು ಸಂಘರ್ಷ ವಲಯದಿಂದ ಪಲಾಯನ ಮಾಡಿದ್ದು, ಇನ್ನೂ 50,000 ಜನರು ಸಿಕ್ಕಿಬಿದ್ದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕನಿಷ್ಠ 3000 ಗರ್ಭಿಣಿ ಮಹಿಳೆಯರು ಕದನದ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಅವರಲ್ಲಿ 350 ಮಂದಿ ಮುಂದಿನ ತಿಂಗಳು ಜನ್ಮ ನೀಡಲಿದ್ದಾರೆಂದು ಯುಎನ್‌ಎಫ್‌ಪಿಎ ನಂಬಿದೆ. ಇಂತಹ ಭಾವುಕ ಸನ್ನಿವೇಶದಲ್ಲಿ ಮಹಿಳೆಯರ ಆರೋಗ್ಯ ಹಾಗೂ ಗರ್ಭ ಮತ್ತು ಮಕ್ಕಳ ಜನನಕ್ಕೆ ಸಂಬಂಧಿಸಿದ ತೊಡಕುಗಳನ್ನು ಕಡೆಗಣಿಸಬಾರದು ಎಂದು ಯುಎನ್‌ಎಪ್‌ಪಿಎ ಪ್ರತಿನಿಧಿ ಕೆ. ಕ್ರಿಶ್ಚಿಯಾನ್‌ಸೇನ್ ತಿಳಿಸಿದ್ದಾರೆ.
ಜನ್ಮಧಾರಣೆ ಸಂದರ್ಭದಲ್ಲಿ ರಕ್ತದ ಕೊರತೆ ಅಥವಾ ತುರ್ತು ಶಸ್ತ್ರಚಿಕಿತ್ಸೆ ಮುಂತಾದ ಸಂಕೀರ್ಣತೆಗಳನ್ನು ಶೇ. 15ರಷ್ಟು ಮಹಿಳೆಯರು ಎದುರಿಸುತ್ತಾರೆಂಬುದನ್ನು ಏಜನ್ಸಿ ಗಮನಿಸಿದೆ. ಸಂಘರ್ಷದ ಸಂದರ್ಭದಲ್ಲಿ ಗರ್ಭಿಣಿ ಸಂಬಂಧಿತ ತೊಡಕುಗಳು ಮತ್ತು ಸಾವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಅದು ಹೇಳಿದೆ. |