ನೆರೆಯ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆಗಳ ಬಳಿಕ ಅದರ ಜತೆ ಉತ್ತಮ ಬಾಂಧವ್ಯಕ್ಕಾಗಿ ಎದುರುನೋಡುತ್ತಿರುವುದಾಗಿ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿಳಿಸಿದ್ದು, ಭಾರತ-ಪಾಕ್ ಬಾಂಧವ್ಯ ಸುಧಾರಿಸುವ ಅಮೆರಿಕದ ಯಾವುದೇ ನೆರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ಸಹವರ್ತಿ ಹಮೀದ್ ಕರ್ಜೈ ಸಮೇತ ಸೆನೆಟ್ ವಿದೇಶಾಂಗ ಬಾಂಧವ್ಯ ಸಮಿತಿಯ ಸದಸ್ಯರ ಜತೆಯಲ್ಲಿ ಭೇಟಿಯಾದ ಬಳಿಕ ಕ್ಯಾಪಿಟಲ್ ಹಿಲ್ ಪ್ರೆಸ್‌ನಲ್ಲಿ ವರದಿಗಾರರ ಜತೆ ಅವರು ಮಾತನಾಡುತ್ತಿದ್ದರು.
'ಅವರಿಗೆ ಈ ಕ್ಷಣದಲ್ಲಿ ಬಿಡುವಿಲ್ಲವೆಂದು ತಮಗೆ ಗೊತ್ತಿದೆ. ಪ್ರಜಾಪ್ರಭುತ್ವಗಳು ಸದಾ ಪ್ರಜಾಪ್ರಭುತ್ವ ಸರ್ಕಾರಗಳ ಜತೆ ಕೆಲಸ ಮಾಡಲು ಇಷ್ಟಪಡುತ್ತದೆ. ತಾವು ಉತ್ತಮ ಬಾಂಧವ್ಯ ಬಯಸುವುದಾಗಿ' ಜರ್ದಾರಿ ಹೇಳಿದರು.
ಜರ್ದಾರಿ ಪಕ್ಕದಲ್ಲಿ ಕರ್ಜೈ ಮತ್ತು ಸೆನೆಟ್ ಸದಸ್ಯರಾದ ಜಾನ್ ಕೆರಿ ಮತ್ತು ರಿಚರ್ಡ್ ಲೂಗಾರ್ ಇದ್ದರು. ಸಿಎನ್‌ಎನ್ ಜತೆ ಈ ವಾರದ ಆದಿಯಲ್ಲಿ ನಡೆದ ಸಂದರ್ಶನದಲ್ಲಿ ಉಭಯ ರಾಷ್ಟ್ರಗಳ ನಡುವೆ ಪ್ರಜಾಪ್ರಭುತ್ವ ಸರ್ಕಾರವಿದ್ದಾಗ ಯುದ್ಧ ನಡೆದಿಲ್ಲವೆಂದು ಪ್ರತಿಪಾದಿಸಿದರು. ಒಂದೊಮ್ಮೆ ಚುನಾವಣೆ ಮುಗಿದರೆ ಭಾರತದ ಜತೆ ಹೊಸದಾಗಿ ಮಾತುಕತೆ ನಡೆಸುವುದಾಗಿ ಅವರು ಹೇಳಿದರು. ಅಮೆರಿಕ ಮತ್ತು ಆಫ್ಘಾನಿಸ್ತಾನದ ಜತೆ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಜರ್ದಾರಿ ಅಮೆರಿಕದಲ್ಲಿದ್ದರು. |