ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಗುರುವಾರ ತಡರಾತ್ರಿಯಲ್ಲಿ ಶಾಂತಿಒಪ್ಪಂದವನ್ನು ರದ್ದುಮಾಡಿದ ಬಳಿಕ ಪಾಕಿಸ್ತಾನದ ಸ್ವಾಟ್ ಕಣಿವೆಯಲ್ಲಿ ಸೇನಾಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಪಾಕಿಸ್ತಾನವು ತಾಲಿಬಾನ್ ದಮನಿಸುವ ಅಗತ್ಯವಿದ್ದು, ಅದೊಂದು ಮಾರಕ ಭಯೋತ್ಪಾದಕ ಸಂಘಟನೆಯೆಂದು ಹೇಳಿದ್ದಾರೆ.
ಏತನ್ಮಧ್ಯೆ, ಸಾವಿರಾರು ಭಯಭೀತ ಪಾಕಿಸ್ತಾನಿಯರು ತಾಲಿಬಾನ್‌ನ ರಸ್ತೆತಡೆಗಳಿಂದ ನುಣುಚಿಕೊಂಡು ನಿರಾಶ್ರಿತರ ಶಿಬಿರಗಳಿಗೆ ಧಾವಿಸುತ್ತಿದ್ದು, ಹಸಿದ, ಬಸವಳಿದ ಮಕ್ಕಳ ಸಮೇತ ಆಸ್ಪತ್ರೆಗಳಲ್ಲಿ ಕಿಕ್ಕಿರಿದು ನೆರೆದಿದ್ದಾರೆ.
ಉಗ್ರಗಾಮಿಗಳು ಮತ್ತು ಸರ್ಕಾರದ ನಡುವೆ ಶಾಂತಿ ಒಪ್ಪಂದ ಮುರಿದುಬಿದ್ದ ಬಳಿಕ ಸ್ವಾಟ್ ಕಣಿವೆಯಿಂದ ಹತ್ತಾರು ಸಾವಿರ ಜನರು ತಮ್ಮ ಮನೆಗಳನ್ನು ತ್ಯಜಿಸಿದ್ದಾರೆಂದು ವಿಶ್ವಸಂಸ್ಥೆ ತಿಳಿಸಿದೆ. ಅಲ್ ಜಜೀರಾ ಟೆಲಿವಿಷನ್ ತೆಗೆದ ಇತ್ತೀಚಿನ ವಿಡಿಯೊ ಚಿತ್ರದಲ್ಲಿ ಬುನೇರ್ ಜಿಲ್ಲೆಯಲ್ಲಿ ನಾಶವಾದ ವಾಹನಗಳು ಮತ್ತು ಕಟ್ಟಡಗಳನ್ನು ತೋರಿಸಲಾಗಿದೆ. |