ನಿಶ್ಶಸ್ತ್ರೀಕರಣ ಮಾತುಕತೆ ಪುನಾರಂಭಕ್ಕೆ ಅಮೆರಿಕದ ಪ್ರತಿನಿಧಿಯೊಬ್ಬರು ಉತ್ತರಕೊರಿಯಲ್ಲಿ ಪ್ರವಾಸ ಕೈಗೊಳ್ಳಲಿರುವ ನಡುವೆ, ವಾಷಿಂಗ್ಟನ್‌ನ ವೈರತ್ವ ನೀತಿಯ ಮುಂದುವರಿಕೆ ವಿರುದ್ಧ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುವುದಾಗಿ ಉತ್ತರಕೊರಿಯ ಶುಕ್ರವಾರ ಶಪಥ ತೊಟ್ಟಿದೆ. ಕಳೆದ 100
ದಿನಗಳಿಂದ ಒಬಾಮಾ ಆಡಳಿತದ ನೀತಿಯನ್ನು ಅಧ್ಯಯನ ಮಾಡಿದಾಗ ಉತ್ತರ ಕೊರಿಯ ವಿರುದ್ಧ ವೈರತ್ವದ ನೀತಿಯಲ್ಲಿ ಅಮೆರಿಕ ಬದಲಾವಣೆ ಮಾಡಿಕೊಂಡಿಲ್ಲವೆನ್ನುವುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದರು.
ವಾಷಿಂಗ್ಟನ್ ವಿಶೇಷ ಪ್ರತಿನಿಧಿ ಸ್ಟೀಫನ್ ಬಾಸ್‌ವರ್ತ್ ಗುರುವಾರ ಚೀನಾಗೆ ಆಗಮಿಸಿದ್ದು, ಶುಕ್ರವಾರ ತಡವಾಗಿ ದಕ್ಷಿಣ ಕೊರಿಯಕ್ಕೆ ಆಗಮಿಸಲಿದ್ದು, ಉತ್ತರ ಕೊರಿಯ ಜತೆ ಮಾತುಕತೆಗೆ ಇಚ್ಛಿಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಉತ್ತರ ಕೊರಿಯದ ರಾಕೆಟ್ ಉಡಾವಣೆಯನ್ನು ಖಂಡಿಸಿ ದಿಗ್ಬಂಧನಗಳನ್ನು ಬಿಗಿಗೊಳಿಸಿದ ಬಳಿಕ, 6 ರಾಷ್ಟ್ರಗಳ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮಾತುಕತೆಯನ್ನು ತ್ಯಜಿಸುವುದಾಗಿ ಉತ್ತರಕೊರಿಯ ತಿಳಿಸಿದ್ದು, ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ತಯಾರಿಕೆ ಕಾರ್ಯಕ್ರಮ ಪುನಾರಂಭಿಸುವುದಾಗಿ ಘೋಷಿಸಿದೆ. |