ಎಚ್1ಎನ್1 ಫ್ಲೂ ಜ್ವರದ ಪ್ರಥಮ ಸಾವನ್ನು ಕೆನಡಾ ಶುಕ್ರವಾರ ದೃಢಪಡಿಸಿದೆ. ಆಲ್ಬರ್ಟಾ ಪ್ರಾಂತ್ಯದಲ್ಲಿ ಗುರುವಾರ ಮಹಿಳೆಯೊಬ್ಬರ ಸಾವಿಗೆ ಹಂದಿ ಜ್ವರ ಕಾರಣವೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಕಳೆದ ಏಪ್ರಿಲ್ 28ರಂದು ಮೃತಪಟ್ಟಿದ್ದು, ಇತರೆ ವೈದ್ಯಕೀಯ ಕಾರಣಗಳಿಗಾಗಿ ಮೃತಪಟ್ಟಿದ್ದರೆಂದು ಈ ಮುಂಚೆ ಭಾವಿಸಲಾಗಿತ್ತು.ಮೃತಮಹಿಳೆಯ ಸಂಬಂಧಿಯೊಬ್ಬರಿಗೆ ಹಂದಿ ಜ್ವರದ ಸಣ್ಣ ಸ್ವರೂಪದ ಸೋಂಕು ತಗುಲಿದಾಗ ಪ್ರಾಂತೀಯ ಆರೋಗ್ಯಾಧಿಕಾರಿ ಪರೀಕ್ಷೆ ನಡೆಸಿದರು. ಆ ಪರೀಕ್ಷೆಗಳಲ್ಲಿ ವೈರಸ್ ಪತ್ತೆಯಾಗಿರುವುದಾಗಿ ಕೆನಡಾ ಮಾಧ್ಯಮ ತಿಳಿಸಿದೆ. ಆದಾಗ್ಯೂ, ರೋಗಿಯು ಕೇವಲ ಸೌಮ್ಯ ಲಕ್ಷಣದ ಫ್ಲೂ ಜ್ವರಕ್ಕೆ ಈಡಾಗಿದ್ದು, ವೈರಸ್‌ನಿಂದ ಅವರ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುತ್ತದೆಂದು ದೃಢಪಟ್ಟಿಲ್ಲ.
ಮುಂದಿನ ವಾರ ರೋಗಲಕ್ಷಣ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಮೃತಮಹಿಳೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ 300 ಜನರ ಮೇಲೆ ಆರೋಗ್ಯಾಧಿಕಾರಿಗಳು ಸೂಕ್ಷ್ಮ ನಿಗಾವಹಿಸಿದ್ದಾರೆ. |