ಅಮೆರಿಕ ಮತ್ತು ಮಿತ್ರ ಶಕ್ತಿಗಳು ಆಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸುವುದಕ್ಕೆ ತೆರೆಎಳೆಯುವಂತೆ ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಶನಿವಾರ ಒತ್ತಾಯಿಸಿದ್ದಾರೆ.
ಈ ವಾರದ ಆದಿಯಲ್ಲಿ ಅಮೆರಿಕದ ವಾಯುದಾಳಿಯಲ್ಲಿ ಸುಮಾರು 100 ನಾಗರಿಕರು ಹತರಾಗಿದ್ದರು. ಬಳಿಕ ಅಮೆರಿಕ ಅಧ್ಯಕ್ಷ ಒಬಾಮಾ ಮ್ತತು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಈ ಬಗ್ಗೆ ವಿಷಾದಿಸಿದ್ದರು. ಅಮೆರಿಕವು ನಾಗರಿಕರ ಸಾವುನೋವಿನ ಬಗ್ಗೆ ಆಫ್ಘನ್ ಸರ್ಕಾರದ ಜತೆ ಜಂಟಿ ತನಿಖೆಗೆ ಆದೇಶಿಸಿತು.
ವಾಯುದಾಳಿಯು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪರಿಮಾಣಕಾರಿ ಮಾರ್ಗವಲ್ಲವೆಂದು ತಾವು ನಂಬಿರುವುದಾಗಿ ಕರ್ಜೈ ಸಿಎನ್‌ಎನ್‌ಗೆ ಸಂದರ್ಶನದಲ್ಲಿ ಹೇಳಿದರು. ಅದು ಅಮೆರಿಕಕ್ಕೆ ಒಳ್ಳೆಯದಲ್ಲ. ಆಫ್ಘಾನಿಸ್ತಾನಕ್ಕೂ ಅದು ಒಳ್ಳೆಯದಲ್ಲ. ಯುದ್ಧ ಮಾಡುವುದಕ್ಕೆ ಅದು ಒಳ್ಳೆಯ ವಿಧಾನವಲ್ಲ ಎಂದು ಅವರು ನುಡಿದರು.
ಕಾರ್ಯಾಚರಣೆಯನ್ನು ಸೂಕ್ತ ರೀತಿಯಲ್ಲಿ ನಡೆಸಲು ನಾವು ಒತ್ತಾಯಿಸುತ್ತೇವೆ. ವೈಮಾನಿಕ ಕಾರ್ಯಾಚರಣೆಗೆ ಮುಕ್ತಾಯ ಹಾಡಲು ನಾವು ಬಯಸುತ್ತೇವೆ ಎಂದು ಕರ್ಜೈ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಯುದ್ಧವನ್ನು ಆಫ್ಘನ್ ಗ್ರಾಮಗಳಲ್ಲಿ ಮತ್ತು ಮನೆಗಳಲ್ಲಿ ನಡೆಸಬಾರದೆಂದು ಅಭಿಪ್ರಾಯಪಟ್ಟ ಅವರು, ರಾತ್ರಿ ವೇಳೆ ದಿಢೀರನೇ ಮನೆಗಳಿಗೆ ಬಾಂಬ್ ಉದುರಿಸಿ ಸ್ಫೋಟಿಸುವುದು ಯುದ್ಧದ ವಿಧಾನವಲ್ಲ ಎಂದು ಅವರು ನುಡಿದರು. |