ನೇಪಾಳದ ಪ್ರಧಾನಮಂತ್ರಿಯಾಗಿದ್ದ ಪ್ರಚಂಡ ಸೇನಾ ಮುಖ್ಯಸ್ಥರನ್ನು ವಜಾ ಮಾಡುವುದನ್ನು ತಪ್ಪಿಸಲು ಭಾರತ ಯತ್ನಿಸಿದ್ದರಿಂದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆಯೆಂದು ನೇಪಾಳದಿಂದ ಖಂಡನೆಗೆ ಗುರಿಯಾದ ಸಂದರ್ಭದಲ್ಲೇ ಚೀನಾ ಪ್ರಚಂಡರವರಿಗೆ ಸಂದೇಶಗಳನ್ನು ಕಳಿಸಿ ಭಾರತದ ಇಚ್ಛೆಗೆ ತದ್ವಿರುದ್ಧವಾಗಿ ಹೋದರೆ ಬೆಂಬಲ ನೀಡುವುದಾಗಿ ಹೇಳಿದೆ.
ಆ ನಿರ್ಣಾಯಕ ದಿನಗಳಲ್ಲಿ ನೇಪಾಳದಲ್ಲಿನ ವಿದ್ಯಮಾನಗಳ ಬಗ್ಗೆ ನಿಗಾವಹಿಸಿದ ಮೂಲಗಳ ಪ್ರಕಾರ, ಪ್ರಚಂಡ ಸೇನಾ ಮುಖ್ಯಸ್ಥರನ್ನು ವಜಾ ಮಾಡುವ ನಿಲುವಿಗೆ ಅಂಟಿಕೊಳ್ಳಬೇಕೆಂದು ಚೀನಾ ತಿಳಿಸಿತ್ತು. ನೇಪಾಳ ಸೇನೆಗೆ ಸೇರ್ಪಡೆಯಾಗಲು ಪಿಎಲ್‌ಎ ಕಾರ್ಯಕರ್ತರಿಗೆ ತರಬೇತಿ ಸಹ ನೀಡುವುದಾಗಿ ಅದು ಹೇಳಿದೆ. ಚೀನಾ ನೀಡಿದ ಭರವಸೆಯಿಂದಾಗಿ ಸರ್ಕಾರದ ಮಿತ್ರಪಕ್ಷಗಳ ಅಭಿಪ್ರಾಯ ಕಡೆಗಣಿಸಿದ ಪ್ರಚಂಡ ವಜಾ ಮಾಡುವ ಕ್ರಮಕ್ಕೆ ಚಾಲನೆ ನೀಡಿದ್ದರಿಂದ ಸರ್ಕಾರ ಮತ್ತು ನೇಪಾಳದಲ್ಲಿ ಕುಡಿಯೊಡೆದ ಪ್ರಜಾಪ್ರಭುತ್ವದ ಹಸುಗೂಸಿಗೆ ಮಾರಕ ಪರಿಣಾಮ ಬೀರಿತೆಂದು ಹೇಳಲಾಗಿದೆ. ನೇಪಾಳದ ಸೇನೆ ಮತ್ತು ನ್ಯಾಯಾಂಗವನ್ನು ಕೈವಶ ಮಾಡಿಕೊಳ್ಳುವ ಮಾವೋವಾದಿಗಳ ಕಾರ್ಯತಂತ್ರವು ಸೋರಿಕೆಯಾದ ವಿಡಿಯೊದಿಂದ ಬಯಲಾಗಿತ್ತು. ಕಠ್ಮಂಡುವಿನಲ್ಲಿ ರಾಜಕೀಯ ಗೊಂದಲಗಳು ಇದರಿಂದಾಗಿ ನೂರ್ಮಡಿಸಿತು.
ವಿಡಿಯೊ ಸಂದೇಶದಲ್ಲಿ ಪ್ರಚಂಡ ತಮ್ಮ ಕಾರ್ಯಕರ್ತರ ಜತೆ ಮಾತನಾಡುತ್ತಾ, ಅಧಿಕಾರವನ್ನು ಕಬಳಿಸುವುದು ತಮ್ಮ ಮುಖ್ಯಗುರಿಯಾಗಿದ್ದು, ತಮ್ಮ ಗುರಿ ಸಾಧನೆಗೆ ಶಾಂತಿ ಒಪ್ಪಂದಕ್ಕೆ ಸಹಿಹಾಕಿರುವುದು ಕೇವಲ ಕಾರ್ಯತಂತ್ರವಷ್ಟೇ ಎಂದು ತಿಳಿಸುವ ಮೂಲಕ ವಿವಾದದ ಕಿಡಿ ಸ್ಫೋಟಿಸಿದ್ದರು. |