ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಕೆಲವು ಪಡೆಗಳನ್ನು ಭಾರತದ ಗಡಿಭಾಗದಿಂದ ಸ್ಥಳಾಂತರಿಸಿದ್ದು, ಇನ್ನಷ್ಟು ಪಡೆಗಳನ್ನು ತಾಲಿಬಾನ್ ಮತ್ತು ಅಲ್ ಖಾಯಿದಾ ವಿರುದ್ಧ ಹೋರಾಟಕ್ಕೆ ಭಾರತದ ಗಡಿಯಿಂದ ಪಾಕಿಸ್ತಾನದ ಪಶ್ಚಿಮ ಗಡಿಗೆ ಸ್ಥಳಾಂತರಿಸಲು ಸಿದ್ಧವಾಗಿರುವುದಾಗಿ ಅಧ್ಯಕ್ಷ ಜರ್ದಾರಿ ತಿಳಿಸಿದ್ದಾರೆ.ತಾಲಿಬಾನ್ ವಿರುದ್ಧ ಕಾರ್ಯಾಚರಣೆಗೆ ಪಾಕಿಸ್ತಾನದ ಮೇಲೆ ಅಮೆರಿಕ ಒತ್ತಡ ಹೇರುತ್ತಿದ್ದು, ಪಾಕಿಸ್ತಾನವು ಭಾರತವನ್ನು ಮುಖ್ಯ ಬೆದರಿಕೆಯಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಪೂರ್ವ ಗಡಿಯಿಂದ ಸೇನೆಯನ್ನು ಸ್ಥಳಾಂತರಿಸಲು ಇಸ್ಲಾಮಾಬಾದ್ ಹಿಂಜರಿದಿತ್ತು. ವಾಷಿಂಗ್ಟನ್ನಿನಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರನ್ನು ಭೇಟಿ ಮಾಡಿದ ಜರ್ದಾರಿ, ಭಾರತದಿಂದ ಪಾಕ್‌ಗೆ ಮುಖ್ಯ ಬೆದರಿಕೆಯೆಂಬ ಪರಿಕಲ್ಪನೆ ದಾರಿತಪ್ಪಿಸುವುದಾಗಿದ್ದು, ರಾಷ್ಟ್ರದೊಳಕ್ಕೆ ಬೇರುಬಿಟ್ಟಿರುವ ಭಯೋತ್ಪಾದಕರು ಪಾಕ್ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆಯೆಂದು ಮನದಟ್ಟು ಮಾಡಿದ್ದರು.ನಾವು ಕೆಲವು ಪಡೆಗಳನ್ನು ಸ್ಥಳಾಂತರಿಸಿದ್ದು, ಅಗತ್ಯಬಿದ್ದರೆ ಇನ್ನಷ್ಟು ಪಡೆಗಳನ್ನು ಸ್ಥಳಾಂತರಿಸುವುದಾಗಿ ಅಮೆರಿಕದ ಮನವಿ ಬಗ್ಗೆ ಸಂದರ್ಶನವೊಂದರಲ್ಲಿ ಜರ್ದಾರಿ ಅವರನ್ನು ಪ್ರಶ್ನಿಸಿದಾಗ ಮೇಲಿನಂತೆ ತಿಳಿಸಿದ್ದಾರೆ. ಪಾಕಿಸ್ತಾನದ ಪರಿಸ್ಥಿತಿ ಬಗ್ಗೆ ತೀವ್ರ ಆತಂಕಗೊಂಡಿರುವುದಾಗಿ ಅಮೆರಿಕ ತಿಳಿಸಿದ ಬಳಿಕ ಜರ್ದಾರಿ ಪ್ರತಿಕ್ರಿಯೆ ಹೊರಬಿದ್ದಿದೆ. |