ತಾಲಿಬಾನ್ ವಿರುದ್ಧ ಸರ್ವಶಕ್ತಿಯ ಯುದ್ಧ ಸಾರುವ ಪಾಕಿಸ್ತಾನ ಸರ್ಕಾರದ ನಿರ್ಧಾರದ ಬಗ್ಗೆ ಆಕ್ರೋಶಗೊಂಡಿರುವ ತಾಲಿಬಾನ್, ರಾಷ್ಟ್ರದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯುಸುಫ್ ರಾಜಾ ಗಿಲಾನಿ ಮತ್ತು ನಿಕಟ ಕುಟುಂಬದವರು ಸೇರಿದಂತೆ ಉನ್ನತ ನಾಯಕರನ್ನು ಮುಗಿಸುವುದಾಗಿ ಶಪಥತೊಟ್ಟಿದೆ.
ಧಾರ್ಮಿಕ ಕುಟಂಬದ ಸದಸ್ಯರಾಗಿ ಮಲಾಕಾಂಡ್ ವಿಭಾಗದಲ್ಲಿ ಶರಿಯತ್ ಕಾನೂನು ಜಾರಿಗೆ ಗಿಲಾನಿ ಬೆಂಬಲಿಸುತ್ತಾರೆಂದು ನಾವು ಭಾವಿಸಿದ್ದೆವು. ಬದಲಿಗೆ ತಾಲಿಬಾನ್ ವಿರುದ್ಧ ಸರ್ವಶಕ್ತಿಯ ಯುದ್ಧವನ್ನು ಗಿಲಾನಿ ಘೋಷಿಸಿದ್ದು, ಇದು ನಮ್ಮ ದಂಡಾಧಿಕಾರಿ ಮತ್ತು ಹೋರಾಟಗಾರರಿಗೆ ಸಿಟ್ಟುಬರಿಸಿದೆ ಎಂದು ಹೆಸರು ಹೇಳದ ತಾಲಿಬಾನ್ ಕಮಾಂಡರ್ ತಿಳಿಸಿದ್ದಾರೆ.
ದೂರವಾಣಿಯಲ್ಲಿ ಸುದ್ದಿಪತ್ರಿಕೆ ಜತೆ ಮಾತನಾಡಿದ ಉಗ್ರಗಾಮಿ ಕಮಾಂಡರ್, ಸ್ವಾತ್ ಕಣಿವೆ ಮತ್ತು ನೆರೆಹೊರೆಯ ಪ್ರದೇಶದಿಂದ ತಾಲಿಬಾನನ್ನು ಗುಡಿಸಿಹಾಕುವುದಾಗಿ ರಾಷ್ಟ್ರವನ್ನು ಉದ್ದೇಶಿಸಿ ಗಿಲಾನಿ ಘೋಷಿಸಿದ ಬಳಿಕ, ಉಗ್ರಗಾಮಿಗಳು ಅಧ್ಯಕ್ಷ, ಪ್ರಧಾನಿ ಮತ್ತು ನಿಕಟ ಬಂಧುಗಳು ಸೇರಿದಂತೆ ಆಡಳಿತರೂಢ ಮೈತ್ರಿಕೂಟದ ಉನ್ನತ ನಾಯಕರ ನಿರ್ವಂಶಕ್ಕೆ ಯೋಜಿಸಿದೆ ಎಂದು ತಿಳಿಸಿದ್ದಾರೆ.
ಗಿಲಾನಿಯ ತವರುಪಟ್ಟಣವಾದ ಮುಲ್ತಾನ್ ಮತ್ತು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಸಮಾಧಿ ಮೇಲೆ ಕೂಡ ಉಗ್ರರು ಗುರಿಯಿರಿಸಿದ್ದಾರೆಂದು ಕಮಾಂಡರ್ ಹೇಳಿದ್ದಾನೆ. ನಮ್ಮ ಹಿಟ್ ಲಿಸ್ಟ್‌ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ನೆಲೆಗಳಲ್ಲದೇ ಆಡಳಿತಗಾರರನ್ನು ಪಟ್ಟಿ ಮಾಡಿದ್ದೇವೆ. ನಮ್ಮ ಯೋಜನೆ ಕಾರ್ಯಗತಗೊಳಿಸಲು ಖಂಡಿತವಾಗಿ ಕೆಲವು ಸಮಯ ಹಿಡಿಯುತ್ತದೆ. ಆದರೆ ಇದು ಅಸಾಧ್ಯವಾದ ಕೆಲಸವೇನೂ ಅಲ್ಲ. ಪಾಕಿಸ್ತಾನದಲ್ಲಿ ಯಾವುದೇ ಸ್ಥಳದಲ್ಲಾದರೂ ದಾಳಿ ಯೋಜನೆ ಕಾರ್ಯಗತಗೊಳಿಸಲು ಎಲ್ಲ ದಾರಿಗಳನ್ನು ಹೊಂದಿರುವುದಾಗಿ ಅವನು ತಿಳಿಸಿದ್ದಾರೆ. |