ಪ್ರಜಾಪ್ರಭುತ್ವ ರೀತ್ಯ ಆಯ್ಕೆಯಾದ ದಕ್ಷಿಣ ಆಫ್ರಿಕಾ ಸರ್ಕಾರದ ನಾಲ್ಕನೇ ಅಧ್ಯಕ್ಷರಾಗಿ ಇಂದು ಜಾಕೋಬ್ ಝೂಮಾ ಪ್ರಮಾಣವಚನ ಸ್ವೀಕರಿಸಿದರು.
ನಾಲ್ಕು ವರ್ಷಗಳ ಕೆಳಗೆ ಅತ್ಯಾಚಾರ ಮತ್ತು ಭ್ರಷ್ಟಾಚಾರ ಹಗರಣಗಳಿಂದ ರಾಜಕೀಯ ಜೀವನ ಬಹುತೇಕ ಮುಗಿಯಿತೆಂದು ಭಾವಿಸಿದ ಜಾಕೋಬ್ ಝೂಮಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಕ್ಷಿಪ್ರವೇಗದಲ್ಲಿ ಗದ್ದುಗೆಗೆ ಏರಿದ್ದು, ಎಲ್ಲರನ್ನೂ ಚಕಿತಗೊಳಿಸಿದೆ.
ತಮ್ಮ ತಂದೆಯ ಸಾವಿನ ಬಳಿಕ ಶಾಲೆಯನ್ನು ತ್ಯಜಿಸಿದ್ದ ಜುಲು ಬುಡಕಟ್ಟಿನ ಝೂಮಾ ತಾಯಿಗೆ ನೆರವಾಗಲು ಆಡುಗಳನ್ನು ಸಾಕುತ್ತಾ ಬಾಲ್ಯದಲ್ಲೇ ದುಡಿತಕ್ಕೆ ಒಡ್ಡಿಕೊಂಡರು. ಏಪ್ರಿಲ್ 22ರಂದು ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎಎನ್‌ಸಿಗೆ ಭರ್ಜರಿ ಜಯ ಗಳಿಸಿಕೊಟ್ಟ ಝೂಮಾ, ಅತ್ಯಾಚಾರ ಮತ್ತು ಭ್ರಷ್ಟಾಚಾರದ ಆಪಾದನೆಗಳಿಂದ ಮುಕ್ತರಾಗಿ ಬಹುಜನಾಂಗೀಯ ರಾಷ್ಟ್ರದಲ್ಲಿ ಭಾರೀ ಜನಪ್ರಿಯತೆ ಗಳಿಸಿದರು.
ವರ್ಚಸ್ವಿ ನಾಯಕನ ವಿರುದ್ಧ ವಿವಾದಿತ ಫ್ರೆಂಚ್ ಶಸ್ತ್ರಾಸ್ತ್ರ ಒಪ್ಪಂದದಿಂದ ಉದ್ಭವಿಸಿದ ಭ್ರಷ್ಟಾಚಾರ ಆರೋಪಗಳನ್ನು ಸಾರ್ವತ್ರಿಕ ಚುನಾವಣೆಗೆ ಕೆಲವೇ ವಾರಗಳ ಮುಂಚೆ ಕೈಬಿಡಲಾಯಿತು. ಎಚ್‌ಐವಿ- ಪಾಸಿಟಿವ್ ಕುಟುಂಬ ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಿಂದ ಕೂಡ ಅವರು ದೋಷಮುಕ್ತರಾದರು.
ಏಪ್ರಿಲ್ 12, 1942ರಲ್ಲಿ ಜನಿಸಿದ ಝೂಮಾ, ಜನಾಂಗಭೇದ ಆಡಳಿತವಿದ್ದಾಗ 17ರ ವಯೋಮಾನದಲ್ಲಿ ಎಎನ್‌ಸಿಗೆ ಸೇರಿದರು. ಜನಾಂಗೀಯಭೇದ ಸರ್ಕಾರ ಉರುಳಿಸಲು ಪಿತೂರಿ ಹೂಡಿದರೆಂಬ ಆರೋಪದ ಮೇಲೆ ರಾಬನ್ ದ್ವೀಪದಲ್ಲಿ 10 ವರ್ಷಗಳ ಕಾಲ ಜನಾಂಗೀಯ ಭೇದ ವಿರೋಧಿ ಕಣ್ಮಣಿ ನೆಲ್ಸನ್ ಮಂಡೇಲಾ ಜತೆ ಅವರನ್ನು ಬಂಧೀಖಾನೆಯಲ್ಲಿ ಇರಿಸಲಾಗಿತ್ತು. |