ಭಾರತವು ಪಾಕಿಸ್ತಾನಕ್ಕೆ ಬೆದರಿಕೆಯಲ್ಲವೆಂದು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿಳಿಸಿದ್ದು, ರಾಷ್ಟ್ರದೊಳಗಿರುವ ಭಯೋತ್ಪಾದಕರಿಂದ ಪಾಕ್ ಬೆದರಿಕೆ ಎದುರಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಪಿಬಿಎಸ್ ನ್ಯೂಸ್ ಚಾನೆಲ್ ಜನಪ್ರಿಯ ಶೋ 'ನ್ಯೂಸ್ ಅವರ್ ವಿತ್ ಜಿಮ್ ಲೆಹರರ್'ಗೆ ಸಂದರ್ಶನ ನೀಡುತ್ತಾ ಈ ವಿಷಯ ತಿಳಿಸಿದ್ದಾರೆ. ಭಾರತ ತಮ್ಮ ರಾಷ್ಟ್ರಕ್ಕೆ ಬೆದರಿಕೆಯಲ್ಲ ಎಂದು ಪಾಕಿಸ್ತಾನದ ಉನ್ನತ ನಾಯಕರೊಬ್ಬರು ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಹೇಳಿದ್ದಾರೆ. ಕೆಲವು ಸಮಯದಿಂದ ಒಬಾಮಾ ಆಡಳಿತವು ಜರ್ದಾರಿ ಮತ್ತು ಪಾಕಿಸ್ತಾನದ ಸೇನೆಗೆ ಇದೇ ವಿಷಯ ಕುರಿತು ಮನವರಿಕೆ ಮಾಡಲು ಯತ್ನಿಸಿದೆ. ' ನಾನು ಭಾರತವನ್ನು ನೆರೆಯ ರಾಷ್ಟ್ರವೆಂದು ಸದಾ ಭಾವಿಸುವುದಾಗಿ ಮತ್ತು ಅದರ ಜತೆ ಬಾಂಧವ್ಯ ಸುಧಾರಣೆಗೆ ಇಚ್ಥಿಸುವುದಾಗಿ ಅವರು ಹೇಳಿದರು. ಕೆಲವು ಬಾರಿ ಭಾರತದ ಜತೆ ನಾವು ಮಧುರ ಸಂಬಂದ ಹೊಂದಿದ್ದೆವು, ಇನ್ನೂ ಕೆಲವು ಕಾಲ ಕಠಿಣ ಸಂಬಂಧವಿತ್ತು. ಮೂರು ಭಾರಿ ಉಭಯ ರಾಷ್ಟ್ರಗಳ ನಡುವೆ ಯುದ್ಧವಾಗಿದ್ದರೂ, ಪ್ರಜಾಪ್ರಭುತ್ವ ಸದಾ ಸಂಬಂಧ ಸುಧಾರಣೆಗೆ ಯತ್ನಿಸುತ್ತದೆಂದು' ಹೇಳಿದರು. ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆ ಭಾರತವೇ ಅಥವಾ ಉಗ್ರಗಾಮಿಗಳೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕಳೆದ ತಿಂಗಳು ನಡೆದ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನವು ಭಾರತದ ಬಗ್ಗೆ ಇರಿಸಿಕೊಂಡ ನಂಬಿಕೆಯು ದಾರಿ ತಪ್ಪಿದೆಯೆಂದು ಒಬಾಮಾ ಹೇಳಿದ್ದರು.ಒಬಾಮಾ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜರ್ದಾರಿ ಜತೆ ಭೇಟಿಯಲ್ಲಿ ಪಾಕಿಸ್ತಾನವು ಭಾರತವನ್ನು ಮುಖ್ಯ ಬೆದರಿಕೆಯೆಂದು ಪರಿಗಣಿಸದೇ ರಾಷ್ಟ್ರದಲ್ಲಿ ಆಂತರಿಕವಾಗಿ ಹುದುಗಿರುವ ಭಯೋತ್ಪಾದಕತೆ ವಿರುದ್ಧ ಹೋರಾಟಕ್ಕೆ ಶಕ್ತಿಯನ್ನು ವಿನಿಯೋಗಿಸಬೇಕೆಂದು ಮನದಟ್ಟುಮಾಡಿದ್ದರು. |