ನೇಪಾಳದಲ್ಲಿ ಉದ್ಬವಿಸಿರುವ ರಾಜಕೀಯ ಬಿಕ್ಕಟ್ಟಿನ ನಿವಾರಣೆಗೆ ನೂತನ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವಂತೆ ನೇಪಾಳದ ಅಧ್ಯಕ್ಷರು ಸೋಮವಾರ ಸಂಸತ್ತಿಗೆ ನಿರ್ದೇಶನ ನೀಡಿದ್ದಾರೆ.
ಈ ನಡುವೆ ಮೂರನೇ ದೊಡ್ಡ ಪಕ್ಷ ಸಿಪಿಎನ್-ಯುಎಂಎಲ್ ನಾಯಕ ಮಾಧವ್ ಕುಮಾರ್ ಪ್ರಧಾನಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಮಾವೋವಾದಿ ನಾಯಕ ಪ್ರಚಂಡ ಅವರ ಹಠಾತ್ ರಾಜೀನಾಮೆ ಬಳಿಕ ಶನಿವಾರ ಮಧ್ಯರಾತ್ರಿಯ ಗಡುವಿನೊಳಗೆ ಒಮ್ಮತದ ಸರ್ಕಾರ ಹೆಣೆಯಲು ರಾಜಕೀಯ ಪಕ್ಷಗಳು ವಿಫಲವಾದ ಬಳಿಕ, ಅಧ್ಯಕ್ಷ ರಾಮ ಬರಾನ್ ಯಾದವ್ ಸಂಸತ್ತಿನ ಅಂಗಳಕ್ಕೆ ಚೆಂಡನ್ನು ಎಸೆದು ಮುಂದಿನ ಸರ್ಕಾರ ರಚನೆಗೆ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವಂತೆ ತಿಳಿಸಿದೆ.
ಪಕ್ಷಗಳು ಒಮ್ಮತಕ್ಕೆ ಬರದಿರುವುದರಿಂದ ಮತ್ತು ಏಕೈಕ ಅಭ್ಯರ್ಥಿಯನ್ನು ಆರಿಸದಿರುವುದರಿಂದ ಬಹುಮತದ ಮೂಲಕ ನೂತನ ಪ್ರಧಾನಮಂತ್ರಿ ಆಯ್ಕೆಗೆ ಸಂಸತ್ತಿಗೆ ಸೂಚಿಸಿರುವುದಾಗಿ ಯಾದವ್ ಅವರ ಪತ್ರಿಕಾ ಸಲಹೆಗಾರ ರಾಜೇಂದ್ರ ದೆಹಾಲ್, ರಾಜಕೀಯ ಪಕ್ಷಗಳಿಗೆ ಕಳಿಸಲಾದ ಹೊಸ ನೋಟಿಸ್ ಕುರಿತು ತಿಳಿಸಿದರು.
ಸೌಮ್ಯವಾದಿ ಎಡಪಂಥೀಯ ಸಿಪಿಎನ್-ಯುಎಂಎಲ್ ತನ್ನ ಕೇಂದ್ರ ಮಂಡಳಿ ಸಭೆಯಲ್ಲಿ ತಮ್ಮ ಪಕ್ಷದ ನೇತೃತ್ವದಲ್ಲಿ ನೂತನ ಸರ್ಕಾರ ರಚನೆ ಪ್ರಯತ್ನಕ್ಕೆ ನಿರ್ಧರಿಸಿತೆಂದು ತಿಳಿದುಬಂದಿದೆ. ಹಿರಿಯ ಕಮ್ಯುನಿಸ್ಟ್ ನಾಯಕ, ಜನಾಂಗೀಯ ಭಾರತೀಯ ಮೂಲಕ ಮಾಧವ್ ಕುಮಾರ್ ಮುಂದಿನ ಪ್ರಧಾನಿಯಾಗಬಹುದು ಎಂದು ಹೆಸರು ಹೇಳಲು ಬಯಸದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ |