ಪಾಕಿಸ್ತಾನದಲ್ಲಿರುವ ಎಲ್ಲ ಮದ್ರಸಾಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಸೋಮವಾರ ತಿಳಿಸಿದ್ದಾರೆ.
ಮದ್ರಸಾಗಳಲ್ಲಿ ಉಗ್ರವಾದದ ವಿಷಬೀಜ ಹರಡುವುದರಿಂದ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲು ಮತ್ತು ಅವರಿಗೆ ಆಧುನಿಕದ ಜತೆ ಧಾರ್ಮಿಕ ಶಿಕ್ಷಣ ನೀಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಮುದಾಯ ಭೋಜನಕೂಟದಲ್ಲಿ ಮಾತನಾಡಿದ ಅವರು, ಮದ್ರಸಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ಸರ್ಕಾರಿ ವ್ಯವಸ್ಛೆಯಡಿ ಮದ್ರಸಾಗಳನ್ನು ತರಲು ತಮ್ಮ ಸರ್ಕಾರ ಸಂಕಲ್ಪಿಸಿರುವುದಾಗಿ ಜರ್ದಾರಿ ಹೇಳಿದರು.
ಪಾಕಿಸ್ತಾನದ ವಾಯವ್ಯ ಗಡಿ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಿಕ್ಕಟ್ಟಿನಿಂದ ಸರ್ಕಾರವನ್ನು ಪಾರು ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪಾಕಿಸ್ತಾನವನ್ನು ಹಸ್ತಾಂತರಿಸುವುದಾಗಿ ಜರ್ದಾರಿ ಹೇಳಿದರು.
ಪಾಕಿಸ್ತಾನದ ಎಲ್ಲ ಶಕ್ತಿಗಳ ಜತೆ ಸಾಮರಸ್ಯಕ್ಕೆ, ರಾಷ್ಟ್ರೀಯ ಸಂಸ್ಥೆಗಳ ಪುನರುಜ್ಜೀವನಕ್ಕೆ, ಪಾಕಿಸ್ತಾನದ ಬಲದ ಮರುಸಂಘಟನೆಗೆ ನಾವು ಶ್ರಮಿಸುತ್ತೇವೆ. ನಮಲ್ಲಿ ಅಧಿಕ ಬಲವಿದೆ. ಆದರೆ ನಮ್ಮ ಪೂರ್ಣ ಸಾಮರ್ಥ್ಯವನ್ನು ದೇಶದ ಹಿತಕ್ಕಾಗಿ ಬಳಸಿಕೊಂಡಿಲ್ಲ ಎಂದು ಜರ್ದಾರಿ ಹೇಳಿದ್ದಾಗಿ ವರದಿಯಾಗಿದೆ. |