ಇಲ್ಲಿ ಚಲಿಸುತ್ತಿದ್ದ ರೈಲೊಂದರಲ್ಲಿ ಅಪ್ರಾಪ್ತ ವಯಸ್ಕ ಬಾಲಕರ ಗುಂಪೊಂದು ಭಾರತೀಯ ವಿದ್ಯಾರ್ಥಿಯೊಬ್ಬರಿಗೆ ಥಳಿಸಿ ಅವನ ಬಳಿಯಿದ್ದ ಹಣವನ್ನು ಲೂಟಿ ಮಾಡಿದ ಘಟನೆ ನಡೆದಿದೆ.
ಒಂದು ವರ್ಷದ ಹಿಂದೆ ಹಾಸ್ಪಿಟಾಲಿಟಿ ಅಧ್ಯಯನ ಸಲುವಾಗಿ ಆಸ್ಟ್ರೇಲಿಯಕ್ಕೆ ಬಂದಿದ್ದ 21 ವರ್ಷ ವಯಸ್ಸಿನ ಸೌರಭ್ ಶರ್ಮಾ ಅವರನ್ನು 6 ಮಂದಿ ದುಷ್ಕರ್ಮಿಗಳ ಗುಂಪು ರೈಲಿನಲ್ಲಿ ಅಮಾನವೀಯವಾಗಿ ಥಳಿಸಿತೆಂದು ಅವರು ಹೇಳಿದ್ದಾರೆ. 'ಸಿಗರೇಟಿಗಾಗಿ ತನ್ನನ್ನು ಕೇಳಿದಾಗ ತಾನು ಇಲ್ಲವೆಂದು ಹೇಳಿದೆ. ಹಾಗಾದರೆ ಇಲ್ಲೇಕೆ ಬಂದಿರುವೆ ಎಂದು ಗದರಿಸಿದ ಗುಂಪು ಕಾಲಿನಲ್ಲಿ ಒದೆಯುತ್ತಾ, ಮುಷ್ಠಿಪ್ರಹಾರ ಮಾಡಿದರೆಂದು' ಸೌರಭ್ ಹೇಳಿದ್ದಾಗಿ ವರದಿಯಾಗಿದೆ.
ತಾನು ಸಹಾಯಕ್ಕಾಗಿ ಕಿರುಚಿದರೂ ಅಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಅವರು ಮುಖದ ಮೇಲೆ ಗುದ್ದಿದರೆಂದು ಮತ್ತು ಒದೆಯುತ್ತಲೇ ಇದ್ದರೆಂದು ಸೌರಭ್ ಹೇಳಿದ್ದಾಗಿ ವರದಿಯಾಗಿದೆ. ವಾಚ್ ಮತ್ತು ಪರ್ಸ್ ನೀಡಿದರೂ ಅವರು ಥಳಿಸುತ್ತಲೇ ಇದ್ದರೆಂದು ವರದಿಯಾಗಿದೆ. ಶರ್ಮಾ ಅವರ ಕೆನ್ನೆಯ ಮೂಳೆಗಳು ಮತ್ತು ಹಲ್ಲುಗಳು ಮುರಿದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪಾಶ್ಚಿಮಾತ್ಯರಾಷ್ಟ್ರಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಮೂಡಿ ಅವರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಈ ಪ್ರಕರಣ ತೋರಿಸಿದೆ. |