ವಾಯವ್ಯ ಪಾಕಿಸ್ತಾನದ ಭದ್ರತಾ ಚೌಕಿಯೊಂದರ ಬಳಿ ಸ್ಫೋಟಕ ತುಂಬಿದ ಕಾರನ್ನು ಆತ್ಮಾಹುತಿ ಬಾಂಬರ್ ಸೋಮವಾರ ಸ್ಫೋಟಿಸಿದ್ದರಿಂದ 6 ಜನರು ಅಸುನೀಗಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ.
ಪೇಶಾವರಕ್ಕೆ 25 ಕಿಮೀ ದೂರದ ದಾರಾ ಅಡಂ ಖೇಲ್ ಪಟ್ಟಣದ ಹೊರವಲಯದಲ್ಲಿ ಈ ದಾಳಿ ನಡೆದಿದೆ. ಭದ್ರತಾ ಚೌಕಿ ಬಳಿ ಆತ್ಮಾಹುತಿ ಬಾಂಬರ್ ಕಾರನ್ನು ಸ್ಫೋಟಿಸಿದ್ದರಿಂದ ಒಬ್ಬ ಭದ್ರತಾ ಸಿಬ್ಬಂದಿ, ಐವರು ನಾಗರಿಕರು ಮೃತಪಟ್ಟಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆಂದು ಹೆಸರು ಹೇಳಲು ಬಯಸದ ಮಿಲಿಟರಿ ಅಧಿಕಾರಿ ತಿಳಿಸಿದರು. ಬಾಂಬ್ ಸ್ಫೋಟಿಸಿದ ಸ್ಥಳ ಮತ್ತು ಸಮೀಪದ ಸುರಂಗವನ್ನು ಮುಚ್ಚಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರಗೆ ಕರೆದೊಯ್ಯಲಾಗಿದೆ.
ಸ್ಫೋಟಕ್ಕೆ ಯಾರನ್ನೂ ಹೊಣೆ ಮಾಡಿಲ್ಲ. ಪಾಕಿಸ್ತಾನದ ಭದ್ರತಾ ಪಡೆಗಳು ಇಸ್ಲಾಮಿಕ್ ಉಗ್ರರಿಂದ ಆಗಾಗ್ಗೆ ಬಾಂಬ್ ದಾಳಿಗಳಿಗೆ ಗುರಿಯಾಗುತ್ತಿವೆ. ವಾಯವ್ಯ ಮತ್ತು ಅರೆಸ್ವಾಯತ್ತ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ಸರ್ಕಾರಿ ಪಡೆಗಳು ಭೀಕರ ಕದನ ನಡೆಸುತ್ತಿವೆ. ತಾಲಿಬಾನ್ ಉಗ್ರಗಾಮಿಗಳ ಮೂಲೋತ್ಪಾಟನೆ ಮಾಡುವುದಾಗಿ ಅದ್ಯಕ್ಷ ಜರ್ದಾರಿ ಶಪಥ ತೊಟ್ಟಿದ್ದು, ಸ್ವಾತ್‌ನಲ್ಲಿ ಶಾಂತಿ ಒಪ್ಪಂದ ಮುರಿದುಬಿದ್ದಿದೆ. |