ಮುಂಬೈ ಭಯೋತ್ಪಾದನೆ ದಾಳಿ ನಡೆದ ಬಳಿಕ ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥರನ್ನು ಕಳಿಸಬೇಕೆಂಬ ತಮ್ಮ ಸರ್ಕಾರದ ಪ್ರಸ್ತಾವನೆಯನ್ನು ಅತೀ ಮುಂಚಿತವಾಯಿತೆಂದು ಪಾಕಿಸ್ತಾನದ ಸೇನೆ ತಳ್ಳಿಹಾಕಿತೆಂದು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಸೋಮವಾರ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ಗುಪ್ತಚರ ಮುಖ್ಯಸ್ಥರ ಭೇಟಿಗೆ ಹೊಸ ಪ್ರಸ್ತಾಪವೊಂದನ್ನು ಮಂಡಿಸಲಾಗಿದೆ ಎಂದು ಈ ಬಗ್ಗೆ ವಿವರಣೆ ನೀಡದ ಅವರು ಹೇಳಿದರು. ಈ ಭೇಟಿ ಯಾವಾಗ ನಡೆಯುವ ನಿರೀಕ್ಷೆಯಿದೆ ಮತ್ತು ಭಾರತದ ಪ್ರತಿಕ್ರಿಯೆಯೇನು ಎಂಬುದನ್ನು ಅವರು ತಿಳಿಸಲಿಲ್ಲ. ಐಎಸ್‌ಐ ಮುಖ್ಯಸ್ಥ ಲೆ.ಜ. ಅಹ್ಮದ್ ಶೂಜಾ ಪಾಶಾ ಅವರನ್ನು ನವದೆಹಲಿಗೆ ಕಳಿಸುವುದಕ್ಕೆ ಮಿಲಿಟರಿಯೇಕೆ ಆಕ್ಷೇಪಿಸಿತೆಂದು ಕೇಳಿದಾಗ ಅದು ಅತೀ ಬೇಗವಾಯಿತೆಂದು ಪಾಕಿಸ್ತಾನ ಸೇನೆ ಸಮ್ಮತಿ ಸೂಚಿಸಲಿಲ್ಲವೆಂದು ಎನ್‌ಬಿಸಿ ನ್ಯೂಸ್ ಸಂದರ್ಶನದಲ್ಲಿ ಜರ್ದಾರಿ ಹೇಳಿದರು.
ಐಎಸ್‌ಐ ಮುಖ್ಯಸ್ಥರನ್ನು ನವದೆಹಲಿಗೆ ಕಳಿಸಲು ಸಾಧ್ಯವಾಗಲಿಲ್ಲವೇಕೆಂದು ಜರ್ದಾರಿ ಸಾರ್ವಜನಿಕ ವಿವರಣೆ ನೀಡಿದ್ದು ಇದೇ ಮೊದಲ ಬಾರಿಯಾಗಿದೆ. ಮುಂಬೈ ದಾಳಿಗಳ ಮಧ್ಯೆ, ನವೆಂಬರ್ 28ರಂದು ತಮ್ಮ ಸಹವರ್ತಿ ಮನಮೋಹನ್ ಸಿಂಗ್ ಅವರಿಗೆ ಪಾಕ್ ಪ್ರಧಾನಿ ಗಿಲಾನಿ ಐಎಸ್‌ಐ ಮುಖ್ಯಸ್ಥರನ್ನು ಭಾರತಕ್ಕೆ ಕಳಿಸುವ ಕುರಿತು ಭರವಸೆ ನೀಡಿದ್ದರು. ಈ ವಿದ್ಯಮಾನವನ್ನು ಪ್ರಜಾಪ್ರಭುತ್ವ ರೀತ್ಯ ಆಯ್ಕೆಯಾದ ಪಾಕಿಸ್ತಾನ ಸರ್ಕಾರವನ್ನು ಮಿಲಿಟರಿ ಮತ್ತು ಐಎಸ್‌ಐ ಆಳುತ್ತಿದೆಯೆಂದು ಉದಾಹರಿಸಲಾಗಿತ್ತು. |