ಚೀನಾದ ಟೈನಾನ್ಮೆನ್ ಸ್ಕೇರ್‌ನಲ್ಲಿ ನಡೆದ ಐತಿಹಾಸಿಕ ಪ್ರತಿಭಟನೆಗೆ ಜೂ.4ಕ್ಕೆ 20ನೇ ವರ್ಷ ತುಂಬುತ್ತಿದ್ದಂತೆಯೇ, ಪ್ರತಿಭಟನೆ ದಂಗೆಗಳೇ ಹೆಚ್ಚಾಗುತ್ತಿರುವುದಕ್ಕೆ ಚೀನಾ ಸರ್ಕಾರಕ್ಕೆ ಇದೀಗ ಭಾರೀ ಚಿಂತೆ ಆವರಿಸಿದೆ.
ಮೂಲಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆಗಳಲ್ಲಿ ಭಾರೀ ಹೆಚ್ಚಳ ಕಾಣುತ್ತಿದೆ. ಕಾರ್ಖಾನೆಗಳು, ರೆಸಾರ್ಟ್‌ಗಳು ಬಾಗಿಲು ಮುಚ್ಚುತ್ತಿರುವುದಕ್ಕೆ, ಹಲವು ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವುದಕ್ಕೆ, ಸಂಬಳದಲ್ಲಿ ಕಡಿತಗೊಳಿಸುತ್ತಿರುವುದಕ್ಕೆ, ಉತ್ಪಾದನೆಯನ್ನು ಕಡಿಮೆಗೊಳಿಸಿರುವುದಕ್ಕೆ ಸೇರಿದಂತೆ ನಾನಾ ತರದ ಸಮಸ್ಯೆಗಳನ್ನು ವಿರೋಧಿಸಿ ಚೀನಾದಲ್ಲಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ದೇಶದ ಆರ್ಥಿಕತೆಯೂ ಶೇ.9ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಇದಕ್ಕಾಗಿ ಚೀನಾ ಈಗ ಗಂಭೀರವಾಗಿ ಚಿಂತಿಸುತ್ತಿದೆ.
ಮಾನವ ಸಂಪನ್ಮೂಲದ ಉಪ ಸಚಿವರಾದ ಯಾಂಗ್ ಝಿಮಿಂಗ್ ಹೇಳುವಂತೆ, 2008ರಲ್ಲಿ ಚೀನಾದಲ್ಲಿ ನಡೆದ ಪ್ರತಿಭಟನೆಗಳ ಸಂಖ್ಯೆ 6,93,000. ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕಾರ್ಮಿಕರ ಬೇಡಿಕೆ ಈಡೇರಿಸಲು ಹೋದರೆ ಮೊದಲೇ ಹೊಡೆತ ತಿಂದಿರುವ ದೇಶದ ಆರ್ಥಿಕತೆಗೆ ಇನ್ನೂ ಪೆಟ್ಟು ಬೀಳುತ್ತದೆ. ಇದೇ ನಮಗೆ ಚಿಂತೆ ಉಂಟುಮಾಡಿದೆ ಎನ್ನುತ್ತಾರೆ.
ಯಾಂಗ್ ಅವರು ಹೇಳುವ ಪ್ರಕಾರ, 2008ರಲ್ಲಿ ಕಾರ್ಮಿಕ ಸಂಬಂಧೀ 22,000 ಮೊಕದ್ದಮೆಗಳಲ್ಲಿ ಪ್ರತಿಯೊಂದರಲ್ಲೂ 23ಕ್ಕೂ ಕಾರ್ಮಿಕರು ಆರೋಪಿಗಳಾಗಿದ್ದಾರೆ. ಇದು 2007ರಿಂದ ಶೇ.71ರಷ್ಟು ಹೆಚ್ಚಿದೆ. ಈ ಎಲ್ಲ ಪ್ರಕರಣಗಳಲ್ಲೂ ಕಾರ್ಮಿಕ ಸಂಬಂಧೀ ತೊಂದರೆಗಳಾದ ಉದ್ಯೋಗ ವಜಾ, ಸಂಬಳ ಕಡಿತ, ಸಂಬಳದಲ್ಲಿ ವಿಳಂಬ ಮತ್ತಿತರ ಸಮಸ್ಯೆಗಳೇ ಕಾಣುತ್ತದೆ ಎಂದರು. |