ಶ್ರೀಲಂಕಾದಲ್ಲಿ ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ನೂರಾರು ಮಕ್ಕಳ ಸಾವನ್ನು ರಕ್ತದೋಕುಳಿಯೆಂದು ವಿಶ್ವಸಂಸ್ಥೆ ಸೋಮವಾರ ಖಂಡನೆ ವ್ಯಕ್ತಪಡಿಸಿದೆ. ಏತನ್ಮಧ್ಯೆ ಶ್ರೀಲಂಕಾದಲ್ಲಿ ಸಾವುನೋವಿಗೆ ಸರ್ಕಾರ ಮತ್ತು ಎಲ್‌ಟಿಟಿಇ ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿವೆ.
ತಮಿಳು ಗೆರಿಲ್ಲಾಗಳ ಹಿಡಿತದಲ್ಲಿರುವ ಕರಾವಳಿ ತೀರದ ಸಣ್ಣ ಪ್ರದೇಶದಲ್ಲಿ ಫಿರಂಗಿ ದಾಳಿಗಳಿಂದ ಹತ್ತಾರು ಸಾವಿರ ನಾಗರಿಕರಿರುವ ಪ್ರದೇಶದಲ್ಲಿ ವಿಪರೀತ ಸಾವುನೋವು ಸಂಭವಿಸಿದ್ದಾಗಿ ಎರಡೂ ಕಡೆಯಿಂದ ವರದಿಯಾಗಿದೆ. ವ್ಯಾಪಕ ಪ್ರಮಾಣದಲ್ಲಿ ನಾಗರಿಕರ ಹತ್ಯೆ ಸೇರಿದಂತೆ 100ಕ್ಕೂ ಹೆಚ್ಚು ಮಕ್ಕಳ ಸಾವು, ರಕ್ತಪಾತದ ಸನ್ನಿವೇಶ ವಾಸ್ತವರೂಪ ಪಡೆದಿದ್ದರ ದ್ಯೋತಕವಾಗಿದೆಯೆಂದು ವಿಶ್ವಸಂಸ್ಥೆಯ ವಕ್ತಾರ ಗೋರ್ಡನ್ ವೈಸ್ ಕೊಲಂಬೊನಲ್ಲಿ ತಿಳಿಸಿದರು.
ಆದರೆ ಮಿಲಿಟರಿ ದಾಳಿಯಿಂದ ನಾಗರಿಕರು ಸತ್ತಿದ್ದಾರೆಂದು ಬಂಡುಕೋರರು ಆರೋಪಿಸಿದ್ದಾರೆ. ಆದರೆ ಮಾನವೀಯ ಬಿಕ್ಕಟ್ಟು ಸೃಷ್ಟಿಸಿ ವಿದೇಶಿ ಮಧ್ಯಸ್ಥಿಕೆಗೆ ಒತ್ತಡ ಹೇರಲು ತಮಿಳು ವ್ಯಾಘ್ರಗಳು ತೋಪುಗಳಿಂದ ದಾಳಿ ನಡೆಸುತ್ತಿರುವುದರಿಂದ ನಾಗರಿಕರು ಸಾವಪ್ಪುತ್ತಿದ್ದಾರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅವರು ತಮ್ಮ ಜನರ ಮೇಲೆ ಭಾರೀ ಶಸ್ತ್ರಗಳಿಂದ ಗುಂಡು ಹಾರಿಸಿ ಶ್ರೀಲಂಕಾ ಪಡೆಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯುದ್ಧವಲಯಕ್ಕೆ ಪತ್ರಕರ್ತರಿಗೆ ಮತ್ತು ಅಂತಾರಾಷ್ಟ್ರೀಯ ತಪಾಸಕರ ಮುಕ್ತ ಸಂಚಾರಕ್ಕೆ ಅವಕಾಶವಿಲ್ಲವಾದ್ದರಿಂದ ಅಲ್ಲಿನ ಸಾವುನೋವಿನ ನಿಖರ ಸಂಖ್ಯೆಯನ್ನು ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 37 ವರ್ಷಗಳ ಸಂಘರ್ಷದ ಬಳಿಕ ಎಲ್‌ಟಿಟಿಇ ಸೋಲಿನ ಅಂಚಿನಲ್ಲಿರುವುದಾಗಿ ಸರ್ಕಾರ ನಂಬಿದೆ. 2006ರಲ್ಲಿ ಅಧಿಕಾರದ ಶೃಂಗದಲ್ಲಿದ್ದಾಗ ತಮಿಳು ವ್ಯಾಘ್ರಗಳು ದ್ವೀಪದ ಮೂರನೇ ಒಂದರಷ್ಟು ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ಸುಮಾರು 37 ವರ್ಷಗಳ ಸಂಘರ್ಷದ ಬಳಿಕ ಎಲ್‌ಟಿಟಿಇ ಸೋಲಿನ ಅಂಚಿನಲ್ಲಿರುವುದಾಗಿ ಸರ್ಕಾರ ನಂಬಿದೆ. ಬಳಿಕ ಈಶಾನ್ಯ ತೀರದಲ್ಲಿ ಸಣ್ಣ ಪ್ರದೇಶಕ್ಕೆ ವ್ಯಾಘ್ರಗಳು ಒತ್ತಲ್ಪಟ್ಟಿದ್ದು, ಅಲ್ಲಿ 50,000 ನಾಗರಿಕರು ಉಗ್ರರ ಕೈಯಲ್ಲಿ ಒತ್ತೆಯಾಳಾಗಿದ್ದಾರೆಂದು ವಿಶ್ವಸಂಸ್ಥೆ ಆರೋಪಿಸಿದೆ. |