ತಾಲಿಬಾನ್ ಮತ್ತು ಅಲ್ ಖಾಯಿದಾ ವಿರುದ್ಧ ಹೋರಾಟಕ್ಕೆ ಯುದ್ಧಪೀಡಿತ ಆಫ್ಘಾನಿಸ್ತಾನಕ್ಕೆ 21,000 ಹೆಚ್ಚುವರಿ ಪಡೆಗಳನ್ನು ಕಳಿಸಲು ಅಮೆರಿಕ ಆರಂಭಿಸುತ್ತಿರುವ ನಡುವೆ ಆಫ್ಘಾನಿಸ್ತಾನದಲ್ಲಿರುವ ಪಡೆಗಳಿಗೆ ನೂತನ ದಂಡಾಧಿಕಾರಿಯನ್ನು ಅಮೆರಿಕ ನೇಮಕ ಮಾಡಿದೆ.
ಲೆಫ್ಟಿನೆಂಟ್ ಜನರಲ್ ಸ್ಟಾನ್ಲಿ ಮೆಕ್ರಿಸ್ಟಲ್ ಅವರು ಜನರಲ್ ಡೇವಿಡ್ ಮೆಕ್ಕೀರನ್ ಬದಲಿಗೆ ಆಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಭದ್ರತಾ ನೆರವು ಪಡೆಯ ಮುಖ್ಯಸ್ಥರಾಗಲಿದ್ದಾರೆಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗಿಬ್ಸ್ ಹೇಳಿದ್ದಾರೆ. ಹೊಸ ಸ್ಥಾನಕ್ಕೆ ಅಧಿಕಾರ ವಹಿಸಿಕೊಳ್ಳುವ ಮುಂಚೆ ಸೆನೆಟ್ ಮೆಕ್ರಿಸ್ಟಲ್ ಆಯ್ಕೆಯನ್ನು ದೃಢಪಡಿಸಬೇಕಾಗಿದ್ದು, ಅಲ್ಲಿಯವರೆಗೆ ಮೆಕ್ಕೀರನ್ ಕಮಾಂಡರ್ ಆಗಿ ಉಳಿದಿರುತ್ತಾರೆ.
ನೂತನ ಆಫ್ಘನ್-ಪಾಕಿಸ್ತಾನ ನೀತಿಯ ದೃಷ್ಟಿಯಿಂದ ಅಮೆರಿಕದ ಮಿಲಿಟರಿ ಉನ್ನತ ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಿರುವುದಾಗಿ ಶ್ವೇತಭವನ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ. ಮೆಕ್ಕೀರನ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿರುವುದಾಗಿ ಪೆಂಟಗಾನ್ ಪತ್ರಿಕಾಗೋಷ್ಠಿಯಲ್ಲಿ ಗೇಟ್ಸ್ ತಿಳಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಮಿಲಿಟರಿ ನಾಯಕತ್ವದ ಬದಲಾವಣೆಯಿಂದ ಜನರಲ್ ಮೆಕ್ಕೀರನ್ ಕುರಿತು ಅಧ್ಯಕ್ಷರ ಗೌರವ ಕುಂದಿಲ್ಲ ಎಂದು ಶ್ವೇತಭವನದ ವಕ್ತಾರ ರಾಬರ್ಟ್ ಗಿಬ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. |