ಪಾಕಿಸ್ತಾನದಲ್ಲಿ ಅತ್ಯಂತ ಭಯಭೀತಗೊಳಿಸುವ 2 ಹೆಸರುಗಳು ಸ್ವಾತ್ ತಾಲಿಬಾನ್ ನಾಯಕ ಮೌಲಾನಾ ಫಜಲುಲ್ಲಾ ಮತ್ತು ಅವನ ಡೆಪ್ಯೂಟಿ ಶಾ ದೌರಾನ್.
ಕೆಲವು ವರ್ಷಗಳ ಹಿಂದೆ ದಿನಗೂಲಿ ನೌಕರರಾಗಿ ಕೆಲಸ ಮಾಡಿಕೊಂಡಿದ್ದ ಇವರಿಬ್ಬರ ತೀವ್ರವಾದಿ ಧಾರ್ಮಿಕ ನಂಬಿಕೆಗಳು ಮತ್ತು ಉಗ್ರಗಾಮಿ ಕೃತ್ಯಗಳಿಂದ ಸ್ವಾತ್ ಕಣಿವೆಯಲ್ಲಿ ಭಯಾನಕರೆನಿಸಿದರು. ಸ್ವಾತ್ ಕಣಿವೆಯಲ್ಲಿ ಮೌಲಾನಾ ಫಜಲುಲ್ಲಾ ಮತ್ತು ಶಾ ದೌರಾನ್ ಜೀವನಗಾಥೆಯು ಸಾಮಾಜಿಕವಾಗಿ ಗೌಣರೆನಿಸಿದ್ದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನವನ್ನು ಚೂರು, ಚೂರು ಮಾಡುವ ಬೆದರಿಕೆಯೊಡ್ಡಿರುವ ಸಂಘರ್ಷದಲ್ಲಿ ಪ್ರಧಾನ ಪಾತ್ರವನ್ನು ಹೇಗೆ ವಹಿಸಿದರೆಂಬುದರ ವಿಸ್ಮಯಕಾರಿ ಕಥೆಯಾಗಿದೆ.
ಅಮೆರಿಕ ಮತ್ತು ಪಾಕಿಸ್ತಾನದ ಆಡಳಿತದ ವಿರುದ್ಧ ಅವರ ದ್ವೇಷವು ಅವರಿಬ್ಬರನ್ನು ಜತೆಯಾಗಿಸಿತು. ಇಬ್ಬರೂ ಸರಣಿ ಬಾಂಬ್ ಸ್ಫೋಟಗಳಿಗೆ ಪಿತೂರಿ ರೂಪಿಸಿದ್ದರಿಂದ ಪಾಕ್‌ನಲ್ಲಿ ನೂರಾರು ನಾಗರಿಕರು ಸಾವಪ್ಪಿದರು. ಫಜಲುಲ್ಲಾ ಮತ್ತು ದೌರಾನ್ ಬಡಕುಟುಂಬದಿಂದ ಬಂದವರು. ಆದರೆ ಅವರ ಅದೃಷ್ಟ ಮತ್ತು ಪ್ರಭಾವಗಳಿಂದ ಬೆಳಕಿಗೆ ಬಂದು ತಮಗಾಗಿ ಜೀವತ್ಯಾಗ ಮಾಡುವ ಉಗ್ರಗಾಮಿಗಳ ಗುಂಪನ್ನು ಬೆಳೆಸುವ ಕೆಲಸವನ್ನು ಕೈಗೆತ್ತಿಕೊಂಡರು.
ಫಿಜಾಗಟ್‌ನ ಸ್ವಾತ್ ನದಿಯಲ್ಲಿ ಕೈಚಾಲನೆಯ ಚೇರ್‌ಲಿಫ್ಟ್ ನಿರ್ವಹಿಸುವ ಕೆಲಸವನ್ನು ಫಜಲುಲ್ಲಾ ಮಾಡುತ್ತಿದ್ದ. ಫಜಲುಲ್ಲಾ ನಿರ್ವಹಿಸಿದ ಚೇರ್‌ಲಿಫ್ಟ್‌ನಲ್ಲಿ ತಾನು ಅನೇಕ ಬಾರಿ ಸ್ವಾತ್ ನದಿಯನ್ನು ದಾಟಿದ್ದಾಗಿ ಮರ್ಡಾನ್ ನಿರಾಶ್ರಿತರ ಶಿಬಿರದಲ್ಲಿರುವ ಸಲೀಂ ಖಾನ್ ಸ್ಮರಿಸಿದ್ದಾರೆ. ಕೆಲವು ವರ್ಷಗಳ ಬಳಿಕ, ಫಜಲುಲ್ಲಾ ಸ್ವಾತ್ ಕಣಿವೆ ತೊರೆದು ಮೌಲಾನಾ ಸೂಫಿ ಮಹಮದ್ ಮದರಸಾಗೆ ಸೇರಿದ. ಅಲ್ಲಿಂದ ಆಫ್ಘಾನಿಸ್ತಾನಕ್ಕೆ ತೆರಳಿ ಸೂಫಿ ಮಹಮದ್ ಪುತ್ರಿಯನ್ನು ವಿವಾಹವಾಗಿ ಫಜ್ಲೆ ಹಯಾತ್ ಎಂಬ ತನ್ನ ಹೆಸರನ್ನು ಮೌಲ್ವಿ ಫಜಲುಲ್ಲಾ ಎಂದು ಬದಲಾಯಿಸಿದ.
ದಿರ್ ಬದಲಿಗೆ ಸ್ವಾತ್ ಪ್ರದೇಶವನ್ನು ತನ್ನ ಮುಖ್ಯಕೇಂದ್ರವಾಗಿ ಮಾಡಿಕೊಂಡ ಫಜಲುಲ್ಲಾ, ಮುಲ್ಲಾ ರೇಡಿಯೊ ಎಂಬ ಅಕ್ರಮ ರೇಡಿಯೊ ಚಾನೆಲ್ ಕೂಡ ನಡೆಸುತ್ತಿದ್ದ. ಷರಿಯ ಅಥವಾ ಹುತಾತ್ಮತೆಯನ್ನು ತನ್ನ ಘೋಷಣೆಯಾಗಿ ಸ್ವೀಕರಿಸಿದ ಅವನು, ತನ್ನ ವಾಕ್ಪಟುತ್ವದ ಮೂಲಕ ಸ್ಥಳೀಯ ಜನರನ್ನು ಆಕರ್ಷಿಸಿದ. ಉಗ್ರಗಾಮಿಗಳ ವಿರುದ್ಧ ಪಾಕ್ ಮಿಲಿಟರಿ ಕಾರ್ಯಾಚರಣೆಗೆ ನಡೆಸುವ ಸಂದರ್ಭದಲ್ಲಿ ಶಾ ದೌರಾನ್ ಬೆಳಕಿಗೆ ಬಂದ. ರೇಡಿಯೊ ಮೂಲಕ ಭಯಭೀತಿಯ ಸಂದೇಶಗಳನ್ನು ದೌರಾನ್ ಬಿತ್ತಿದ.
ಸ್ಥಳೀಯ ಇಂಧನ ಕೇಂದ್ರದ ಚೌಕಿದಾರ್ ಪುತ್ರನಾದ ಅವನು ಬೇಕರಿ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿ ಫಜಲುಲ್ಲಾ ಗುಂಪಿಗೆ ಸೇರಿದ. ರೇಡಿಯೊದಲ್ಲಿ ತಾಲಿಬಾನ್ ವಿರೋಧಿಸುವ ಜನರಿಗೆ ಬೆದರಿಕೆಯೊಡ್ಡತೊಡಗಿದ. ತನ್ನ ಸಿದ್ಧಾಂತ ವಿರೋಧಿಸಿದ ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳನ್ನು ಹತ್ಯೆ ಮಾಡಲು ಅವನು ಹೇಸಲಿಲ್ಲ. |