ಅಮೆರಿಕ ಸಂಜಾತ ವರದಿಗಾರ್ತಿ ರೋಕ್ಸಾನಾ ಸಬೇರಿ ಅವರನ್ನು ಮಾನವೀಯತೆ ಸಂಕೇತವಾಗಿ ಇರಾನ್ ಬಿಡುಗಡೆ ಮಾಡಿದ್ದರಿಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಿಟ್ಟುಸಿರುಬಿಟ್ಟಿದ್ದಾರೆ.
ಆದರೆ ಬೇಹುಗಾರಿಕೆ ಆರೋಪಗಳಿಗಾಗಿ ಸಬೇರಿಗೆ ಶಿಕ್ಷೆ ವಿಧಿಸುವುದಕ್ಕೆ ನಿರಾಕರಿಸಿದ್ದಾರೆಂದು ಅವರ ಪರ ವಕ್ತಾರರಾದ ಶ್ವೇತಭವನ ಪತ್ರಿಕಾಕಾರ್ಯದರ್ಶಿ ರಾಬರ್ಟ್ ಗಿಬ್ಸ್ ವರದಿಗಾರರಿಗೆ ತಿಳಿಸಿದರು. ಸಬೇರಿ ಅವರ ಮೇಲೆ ತಪ್ಪಾಗಿ ಆರೋಪ ಹೊರಿಸಲಾಗಿದೆಯೆಂದು ನಾವು ಪ್ರತಿಪಾದಿಸಲು ಬಯಸುತ್ತೇವೆ. ಆದರೆ ಇರಾನ್ ಮಾನವೀಯತೆಯ ಸಂಕೇತವನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.
ಟೆಹರಾನಿನ ಅಪೀಲು ನ್ಯಾಯಾಲಯ ಬೇಹುಗಾರಿಕೆಗಾಗಿ ಸಬೇರಿಯ ಕಾರಾಗೃಹವಾಸದ ಅವಧಿಯನ್ನು 2 ವರ್ಷಗಳ ಅಮಾನತಾದ ಶಿಕ್ಷೆಗೆ ತಗ್ಗಿಸುವ ಮೂಲಕ ಅಮೆರಿಕ-ಇರಾನ್ ಪತ್ರಕರ್ತೆ ಅನುಭವಿಸಿದ ನಾಲ್ಕು ತಿಂಗಳ ಯಾತನೆಗೆ ತೆರೆಎಳೆದಿದೆ. ಸಬೇರಿ ಬಿಡುಗಡೆಯಿಂದಾಗಿ ಅಮೆರಿಕ ಮತ್ತು ಇರಾನ್ ನಡುವೆ ಮೂರು ದಶಕಗಳ ಕಾಲದ ರಾಜತಾಂತ್ರಿಕ ಪ್ರತ್ಯೇಕತೆ ಅಂತ್ಯಗೊಳಿಸುವ ಒಬಾಮಾ ಯತ್ನಗಳಿಗೆ ಆವರಿಸಿದ್ದ ಕರಿಮೋಡ ಸರಿದುಹೋಗಿದೆ. |