ಪ್ರಕ್ಷುಬ್ಧಪೀಡಿತ ಉತ್ತರಶ್ರೀಲಂಕಾದಲ್ಲಿ ತಮಿಳು ನಾಗರಿಕರನ್ನು ರಕ್ಷಿಸುವ ಹೊಣೆಯಿಂದ ಶ್ರೀಲಂಕಾ ಅಧ್ಯಕ್ಷ ಮಹಿಂದ್ರ ರಾಜಪಕ್ಷ ನುಣುಚಿಕೊಳ್ಳುತ್ತಿದ್ದಾರೆಂದು ತಮಿಳು ಅಮೆರಿಕನ್ನರು ಆರೋಪಿಸಿದ್ದು, ಅಮಾಯಕ ತಮಿಳು ಜನರ ಪ್ರಾಣ ರಕ್ಷಣೆಗೆ ಪಡೆಗಳನ್ನು ಕಳಿಸುವಂತೆ ಅಧ್ಯಕ್ಷ ಒಬಾಮಾ ಅವರನ್ನು ಆಗ್ರಹಿಸಿದ್ದಾರೆ.
ಇದೊಂದು ಅಪ್ಪಟ ಹತ್ಯಾಕಾಂಡವಾಗಿದ್ದು, ಶ್ರೀಲಂಕಾ ತಮಿಳರ ಜೀವರಕ್ಷಣೆಗೆ ಮಧ್ಯಪ್ರವೇಶ ಮಾಡುವಂತೆ ಒಬಾಮಾ ಆಡಳಿತವನ್ನು ತಾವು ಒತ್ತಾಯಿಸುವುದಾಗಿ ತಮಿಳು ಅಮೆರಿಕನ್ನರ ಪ್ರತಿಭಟನಾ ಮುಖಂಡ ಎಲಿಯಾಸ್ ಜಯರಾಜಾ3 ತಿಳಿಸಿದ್ದಾರೆ. ಎಲ್‌ಟಿಟಿಇ ನಾಯಕ ಪ್ರಭಾಕರನ್ ಅವರ ಮಾನವಗಾತ್ರದ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಿಡಿದಿದ್ದ ಅಪಾರ ಸಂಖ್ಯೆಯ ತಮಿಳು ಅಮೆರಿಕನ್ನರು, ಶ್ವೇತಭವನದ ಎದುರು ಘೋಷಣೆಗಳನ್ನು ಕೂಗುತ್ತಾ,ಇಡೀ ದಿನ ಪ್ರತಿಭಟನೆಗಳನ್ನು ನಡೆಸಿದರು.
ಶ್ರೀಲಂಕಾದಲ್ಲಿ ನಡೆಯತ್ತಿರುವ ತಮಿಳರ ಕಗ್ಗೊಲೆಯನ್ನು ತಡೆಯಲು ಮಧ್ಯಪ್ರವೇಶಕ್ಕಾಗಿ ಅಮೆರಿಕ ನೇತೃತ್ವದ ಸಮ್ಮಿಶ್ರ ಕೂಟವು ಏಕಪಕ್ಷೀಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.ಶ್ರೀಲಂಕಾ ಸರ್ಕಾರದಿಂದ ಸಾವಿರಾರು ಜನ ಅಮಾಯಕ ತಮಿಳರು ಹತರಾಗಿದ್ದು, ವಿಶ್ವಸಂಸ್ಥೆಯ ರಕ್ಷಣೆ ಹೊಣೆಗಾರಿಕೆಯ ನಿಯಮವನ್ನು ಜಾರಿಗೆ ತರಲು ಇದು ಸಕಾಲವಾಗಿದೆಯೆಂದು ಜಯರಾಜಾ ಹೇಳಿದ್ದಾರೆ.
ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ 'ಕೊಯಲಿಷನ್ ಆಫರ್ ವಿಲ್ಲಿಂಗ್'ಗೆ ಸೇರಲು ನಾವು ಒತ್ತಾಯಿಸುವುದಾಗಿ ಅವರು ಹೇಳಿದರು.ಶ್ರೀಲಂಕಾ ತಮಿಳರ ರಕ್ಷಣೆಗೆ ಭಾರತ ಮುಂದೆ ಬರುತ್ತಿಲ್ಲವಾದ್ದರಿಂದ ಶ್ರೀಲಂಕಾಗೆ ತಮ್ಮ ಪಡೆಗಳನ್ನು ಕಳಿಸಿ ಮುಗ್ಧ ತಮಿಳರ ರಕ್ಷಣೆ ಮಾಡುವಂತೆ ಇತರೆ ರಾಷ್ಟ್ರಗಳಿಗೆ ವಿಶ್ವಾದ್ಯಂತ ತಮಿಳರು ಆಗ್ರಹಿಸಿದ್ದಾರೆಂದು ಜಯರಾಜಾ ಹೇಳಿದ್ದಾರೆ. |