ಜರ್ಜರಿತ ಉತ್ತರಭಾಗದಲ್ಲಿ ಗುಂಡುಹಾರಾಟ ನಿಷೇಧ ವಲಯವನ್ನು ಪ್ರವೇಶಿಸಿರುವ ಶ್ರೀಲಂಕಾ ಪಡೆಗಳು ತಮಿಳು ವ್ಯಾಘ್ರ ಬಂಡುಕೋರರಿಗೆ ಮಾರಣಾಂತಿಕ ಪೆಟ್ಟು ನೀಡಲು ನಿರ್ಧರಿಸಿದ್ದು, ರಾಷ್ಟ್ರವನ್ನು ಒಡೆಯುವ ಎಲ್‌ಟಿಟಿಇ ಪ್ರಯತ್ನ ಸಂಪೂರ್ಣವಾಗಿ ಪುಡಿಯಾಗಿರುವುದಾಗಿ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಘೋಷಿಸಿದ್ದಾರೆ.
ಶ್ರೀಲಂಕಾ ಪಡೆಗಳು ವಾನ್ನಿ ಕಾಡು ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬೃಹತ್ ಭೂಗತ ಶಸ್ತ್ರಗಳನ್ನು ಪತ್ತೆಹಚ್ಚಿದ್ದು, ರಾಷ್ಟ್ರವನ್ನು ವಿಭಜಿಸುವ ಯಾವುದೇ ಶಕ್ತಿಗಳಿಗೆ ತಲೆಎತ್ತಲು ಬಿಡುವುದಿಲ್ಲ ಎಂದು ರಾಜಪಕ್ಷೆ ಹೇಳಿದ್ದಾರೆ. ಶಸ್ತ್ರಗಳಲ್ಲಿ ಉನ್ನತ ಗುಣಮಟ್ಟದ ಶಸ್ತ್ರಗಳು ಮತ್ತು ಅಸಾಲ್ಟ್ ಬಂದೂಕುಗಳು ಸೇರಿದ್ದು, ಲಂಕಾದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಲಾಯನ ಮಾಡಿದ್ದ ಎಲ್‌ಟಿಟಿಇ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ಹೂತಿಟ್ಟಿದ್ದರು.
ವಾನ್ನಿ ಅರಣ್ಯಗಳಲ್ಲಿ ಟನ್‌ಗಟ್ಟಲೆ ಎಲ್‌ಟಿಟಿಇ ಶಸ್ತ್ರಾಸ್ತ್ರಗಳನ್ನು ಭೂಗತ ಶಸ್ತ್ರಾಗಾರದಿಂದ ಹೊರತೆಗೆಯಲಾಗಿದ್ದು, ಇದು ಶ್ರೀಲಂಕಾ ಭವಿಷ್ಯಕ್ಕೆ ಶುಭಲಕ್ಷಣವಾಗಿದೆ ಎಂದು ರಾಜಪಕ್ಷೆ ಹೇಳಿದ್ದಾರೆ. ಆ ಶಸ್ತ್ರಗಳನ್ನು ಬಳಸಿದ್ದರೆ ರಾಷ್ಟ್ರವು ವಿನಾಶದ ಅಂಚಿನಲ್ಲಿ ಸಿಲುಕುತ್ತಿತ್ತು ಎಂದು ಅಧ್ಯಕ್ಷರು ಹೇಳಿದ್ದು, ಶ್ರೀಲಂಕಾ ಮುನ್ನಡೆಯ ವೇಗದಿಂದ ಎಲ್‌ಟಿಟಿಇಗೆ ಅವುಗಳ ಬಳಕೆಗೆ ಅವಕಾಶ ಸಿಗಲಿಲ್ಲ ಎಂದು ರಾಜಪಕ್ಷೆ ಹೇಳಿದರು. |