ಶ್ರೀಲಂಕಾದ ಉತ್ತರಯುದ್ಧವಲಯದಲ್ಲಿ ಕಾರ್ಯನಿರ್ವಹಿಸುವ ಏಕೈಕ ವೈದ್ಯಕೀಯ ಸೌಲಭ್ಯ ಕೇಂದ್ರದ ಮೇಲೆ ಫಿರಂಗಿ ಗುಂಡು ಬಡಿದು, ದಾರಿಹೋಕರು ಸೇರಿದಂತೆ 49 ರೋಗಿಗಳು ಅಸುನೀಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಸರ್ಕಾರಿ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.ಯುದ್ದವಲಯದಲ್ಲಿ ಸಿಕ್ಕಿಬಿದ್ದಿರುವ ನೂರಾರು ನಾಗರಿಕರು ಭಾರೀ ಗುಂಡಿನ ದಾಳಿಗೆ ವಾರಾಂತ್ಯದಲ್ಲಿ ಬಲಿಯಾದ ಬಳಿಕ ಈ ದಾಳಿ ನಡೆಸಲಾಗಿದೆ.
ಬಂಡುಕೋರರ ಅಧೀನದಲ್ಲಿರುವ ಸಣ್ಣ ಕರಾವಳಿ ಪ್ರದೇಶದ ಮೇಲೆ ಇನ್ನೂ ಗುಂಡುಹಾರಿಸಲಾಗುತ್ತಿದೆಯೆಂಬ ಆರೋಪಗಳನ್ನು ಮಿಲಿಟರಿ ನಿರಾಕರಿಸಿದೆ.ಏಕೈಕ ಫಿರಂಗಿ ಗುಂಡು ತಾತ್ಕಾಲಿಕ ಆಸ್ಪತ್ರೆಯ ಪ್ರವೇಶ ವಾರ್ಡ್‌ಗೆ ಬಡಿಯಿತೆಂದು ಯುದ್ಧವಲಯದ ಉನ್ನತ ಸರ್ಕಾರಿ ಆರೋಗ್ಯಾಧಿಕಾರಿ ಡಾ. ದುರೈರಾಜ ವರದರಾಜ ತಿಳಿಸಿದರು.
49 ಜನರ ಸಾವಿನ ಜತೆಗೆ ಅನೇಕ ಮಂದಿ ತಲೆಗೆ ಮತ್ತು ಹೊಟ್ಟೆಗೆ ಗಾಯಗಳಾಗಿದ್ದು, ಸತ್ತವರ ಸಂಖ್ಯೆ ಇನ್ನೂ ಏರುವ ಸಂಭವವಿರುವುದಾಗಿ ಅವರು ಹೇಳಿದ್ದಾರೆ.ಸತ್ತವರಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಕೂಡ ಸೇರಿದ್ದಾರೆಂದು ಹೆಸರು ಹೇಳಲು ಬಯಸದ ಆಸ್ಪತ್ರೆಯ ಅಧಿಕಾರಿ ತಿಳಿಸಿದ್ದಾರೆ. ಯುದ್ಧವಲಯದೊಳಕ್ಕೆ ಪ್ರವೇಶಿಸಲು ಪತ್ರಕರ್ತರಿಗೆ ಮತ್ತು ನೆರವು ಕಾರ್ಯಕರ್ತರಿಗೆ ಸರ್ಕಾರ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಯುದ್ಧದ ವಾಸ್ತವ ಸ್ಥಿತಿಗತಿ ವರದಿ ಮಾಡಲು ಸಾಧ್ಯವಾಗುತ್ತಿಲ್ಲ. |