ಸ್ವಾತ್ ಕಣಿವೆಯ ತಾಲಿಬಾನ್ ನೆಲೆಯಲ್ಲಿ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್‌ಗಳಿಂದ ಮಂಗಳವಾರ ಕಮಾಂಡೊಗಳನ್ನು ಇಳಿಸಲಾಗಿದೆ. ಏತನ್ಮಧ್ಯೆ, ಭದ್ರತಾ ಪಡೆಗಳು ಪಾಕಿಸ್ತಾನದ ವಾಯವ್ಯ ಪ್ರದೇಶದ ಕೆಲವು ಪ್ರಮುಖ ಪಟ್ಟಣಗಳನ್ನು ಕೈವಶ ಮಾಡಿಕೊಂಡಿರುವ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಉತ್ತರ ಸ್ವಾತ್‌ನಲ್ಲಿರುವ ವಿರಳ ಜನಸಂಖ್ಯೆಯ ಪರ್ವತಚ್ಛಾದಿತ ಪ್ರದೇಶ ಪಿಯೋಚಾರ್‌ನಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಪಡೆಗಳನ್ನು ಇಳಿಸಲಾಗಿದೆ. ಸ್ಥಳೀಯ ತಾಲಿಬಾನ್ ಕಮಾಂಡರ್ ಮೌಲಾನಾ ಫಜಲುಲ್ಲಾ ಆ ಪ್ರದೇಶದಲ್ಲಿ ಅಡಗಿದ್ದಾನೆಂದು ಶಂಕಿಸಲಾಗಿದೆ.
ಮನೆಗಳನ್ನು ಮತ್ತು ಕಟ್ಟಡಗಳನ್ನು ತಾಲಿಬಾನ್ ಸುತ್ತುವರಿದಿರುವುದರಿಂದ, ಸ್ವಾತ್ ಮುಖ್ಯ ಪಟ್ಟಣ ಮಿಂಗೋರಾ ಮೇಲೆ ಮುಂಭಾಗದಿಂದ ದಾಳಿ ನಡೆಸಲು ಸೇನೆಗೆ ಕಷ್ಟಕರವಾಗಿ ಪರಿಣಮಿಸಿದ್ದು, ತಾಲಿಬಾನ್ ಹಿಮ್ಮೆಟ್ಟಿಸುವ ಸಲುವಾಗಿ ಪಡೆಗಳನ್ನು ಹೆಲಿಕಾಪ್ಟರ್ ಮೂಲಕ ಇಳಿಸುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ.
ಡಗ್ಗಾರ್ ಪಟ್ಟಣವನ್ನು ತಾಲಿಬಾನ್ ಕೈಯಿಂದ ಕಸಿಯಲು ಸೇನೆಯು ಇದೇ ಮಾದರಿಯ ಕಾರ್ಯಾಚರಣೆಯನ್ನು ನಡೆಸಿತ್ತು.ಸ್ವಾತ್‌ನಲ್ಲಿ ನುರಿತ ತರಬೇತಾದ 5000 ತಾಲಿಬಾನಿಗಳ ವಿರುದ್ಧ 12,000-15000 ಭದ್ರತಾ ಸಿಬ್ಬಂದಿ ಕಾರ್ಯಾಚರಿಸುತ್ತಿದ್ದು, ತಾಲಿಬಾನಿಗಳು ಮಿಂಗೋರಾ ಪಟ್ಟಣದಲ್ಲಿ ಇನ್ನೂ ಬೇರುಬಿಟ್ಟಿದ್ದಾರೆ. ಸೇನೆಯ ಕಾರ್ಯಾಚರಣೆ ಹಿನ್ನೆಲೆಯಲ್ಲಿ 360,000 ಜನಸಂಖ್ಯೆಯ ಪೈಕಿ ಶೇ.50ರಷ್ಟು ಜನರು ಈಗಾಗಲೇ ಪಟ್ಟಣವನ್ನು ತೊರೆದಿದ್ದಾರೆ. |