ಪಾಕಿಸ್ತಾನದ ವಾಯವ್ಯ ನಗರ ಪೇಶಾವರದ ಹೊರಗೆ ನ್ಯಾಟೊ ಪೂರೈಕೆ ಟ್ರಕ್ ನಿಲ್ದಾಣದ ಮೇಲೆ ದಾಳಿ ಮಾಡಿದ ಹತ್ತಾರು ಮಂದಿ ತಾಲಿಬಾನ್ ಹೋರಾಟಗಾರರು 8 ವಾಹನಗಳನ್ನು ನಾಶ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 40-50 ಸಶಸ್ತ್ರ ಉಗ್ರಗಾಮಿಗಳು ನಸುಕು ಹರಿಯುವ ಮುನ್ನವೇ ಡಿಪೊ ಮೇಲೆ ದಾಳಿ ಮಾಡಿ ಹಲವಾರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಪರಾರಿಯಾದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಆಫ್ಘಾನಿಸ್ತಾನಕ್ಕೆ ಸಾಗಣೆಯಾಗಬೇಕಿದ್ದ ಆಹಾರ ತುಂಬಿದ್ದ ಎರಡು ಟ್ರಕ್‌ಗಳು ಸುಟ್ಟು ಭಸ್ಮವಾಗಿವೆಯೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಉಭಯ ರಾಷ್ಟ್ರಗಳ ನಡುವೆ ರಹದಾರಿ ವ್ಯಾಪಾಪ ಒಪ್ಪಂದದ ಅಡಿಯಲ್ಲಿ ಪೂರೈಕೆಗಳನ್ನು ಕಳಿಸಲಾಗಿತ್ತು. 6 ಕಂಟೇನರ್‌ಗಳನ್ನು ಕೂಡ ನಾಶಮಾಡಲಾಗಿದ್ದು ಅವು ಖಾಲಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಧಾವಿಸುವಷ್ಟರಲ್ಲಿ ಉಗ್ರಗಾಮಿಗಳು ಆ ಪ್ರದೇಶದಿಂದ ಪಲಾಯನ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯ ಜ್ವಾಲೆಯನ್ನು ಹತೋಟಿಗೆ ತರಲು 3 ಗಂಟೆಗಳ ಕಾಲ ಶ್ರಮಿಸಿದರು.
ತಾಲಿಬಾನ್ ನೇತೃತ್ವದ ಬಂಡುಕೋರರ ವಿರುದ್ಧ ಹೋರಾಡುವ ಅಮೆರಿಕ ಮತ್ತು ನ್ಯಾಟೊ ನೇತೃತ್ವದ ಪಡೆಗಳಿಗೆ ಆಹಾರ ಮತ್ತಿತರ ಸಾಮಗ್ರಿ ಪೂರೈಸುವ ಟ್ರಕ್‌ಗಳ ಮೇಲೆ ತಾಲಿಬಾನ್ ಉಗ್ರಗಾಮಿಗಳು ಆಗಾಗ್ಗೆ ದಾಳಿ ನಡೆಸುತ್ತಿದ್ದಾರೆ. ವಿದೇಶಿ ಪಡೆಗಳಿಗೆ ಬೇಕಾದ ಪೂರೈಕೆ ಮತ್ತು ಸಾಮಗ್ರಿಗಳನ್ನು ವಾಯವ್ಯ ಪಾಕಿಸ್ತಾನದ ಕೈಬರ್ ಬುಡಕಟ್ಟು ಪ್ರದೇಶದ ಮಾರ್ಗವಾಗಿ ಕಳಿಸಲಾಗುತ್ತಿದೆ. |