ಶ್ರೀಲಂಕಾದ ಯುದ್ಧವಲಯದಲ್ಲಿ ನಾಗರಿಕರ ಸಾವುನೋವು ಹೆಚ್ಚುತ್ತಿರುವ ಬಗ್ಗೆ ಆತಂಕಿತವಾದ ಅಮೆರಿಕ ಮತ್ತು ಬ್ರಿಟನ್, ತಕ್ಷಣವೇ ವೈರತ್ವಕ್ಕೆ ತೆರೆಎಳೆದು ಸಾವಿರಾರು ನಾಗರಿಕರು ಸಿಕ್ಕಿಬಿದ್ದಿರುವ ಪ್ರದೇಶಕ್ಕೆ ಮಾನವೀಯ ನೆರವು ಹರಿದುಬರಲು ಅವಕಾಶ ನೀಡಬೇಕೆಂದು ಕೊಲಂಬೊ ಮತ್ತು ಎಲ್‌ಟಿಟಿಇಗೆ ಬುಧವಾರ ಒತ್ತಾಯಿಸಿದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬ್ಯಾಂಡ್ ಜಂಟಿ ಹೇಳಿಕೆ ನೀಡಿ, ಎರಡೂ ಕಡೆ ವೈರತ್ವವನ್ನು ಕೊನೆಗೊಳಿಸಿ, ಸುರಕ್ಷಿತ ವಲಯದಲ್ಲಿ ಸಿಕ್ಕಿಬಿದ್ದಿರುವ ಸಾವಿರಾರು ನಾಗರಿಕರ ಸುರಕ್ಷಿತ ತೆರವಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಎಲ್ಲ ಶ್ರೀಲಂಕರಲ್ಲಿ ಸಾಮರಸ್ಯ ಮೂಡಿಸುವ ರಾಜಕೀಯ ಪರಿಹಾರಕ್ಕೆ ಕ್ಲಿಂಟನ್ ಮತ್ತು ಮಿಲಿಬ್ಯಾಂಡ್ ಕರೆ ನೀಡಿದ್ದು, ರಾಜಕೀಯ ಜೀವನದಲ್ಲಿ ತಮಿಳು ಮತ್ತಿತರ ಅಲ್ಪಸಂಖ್ಯಾತರಿಗೆ ಅರ್ಥಪೂರ್ಣ ಪಾತ್ರವನ್ನು ಸ್ಥಿರಪಡಿಸುತ್ತದೆಂದು ಹೇಳಿಕೆ ತಿಳಿಸಿದೆ.
ಎಲ್‌ಟಿಟಿಇ ಶಸ್ತ್ರಾಸ್ತ್ರ ತ್ಯಜಿಸಿ ಸಂಘರ್ಷ ವಲಯದಿಂದ ಮುಕ್ತ ನಿರ್ಗಮನಕ್ಕೆ ನಾಗರಿಕೆಗೆ ಅವಕಾಶ ಕಲ್ಪಿಸಬೇಕು. ಮುಖ್ಯ ಯುದ್ಧ ಕಾರ್ಯಾಚರಣೆ ಮತ್ತು ಅಧಿಕ ಸಾಮರ್ಥ್ಯದ ಶಸ್ತ್ರಗಳನ್ನು ನಿಲ್ಲಿಸಲು ಶ್ರೀಲಂಕಾ ಬದ್ಧವಾಗಿರಬೇಕು ಎಂದು ಅವರು ನುಡಿದರು. ಶ್ರೀಲಂಕಾ ಸರ್ಕಾರ ಮತ್ತು ಎಲ್ಟಿಟಿಟಿಇ ಸಂಘರ್ಷ ವಲಯಕ್ಕೆ ಮಾನವೀಯ ನೆರವು ತಂಡವನ್ನು ಕಳಿಸಿ ನಾಗರಿಕರ ಸುರಕ್ಷಿತ ತೆರವಿಗೆ ಅವಕಾಶ ಕಲ್ಪಿಸಬೇಕೆಂದು ಹೇಳಿಕೆ ತಿಳಿಸಿದೆ. |