ಅಮೆರಿಕ ಮಿಲಿಟರಿ ನೆಲೆ ಬಳಿ ಸಂಭವಿಸಿದ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ 7 ನಾಗರಿಕರು ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ.
ಪೂರ್ವ ಪಟ್ಟಣ ಖೋಸ್ಟ್ ಬಳಿ ಈ ದಾಳಿ ನಡೆದಿದ್ದು, ಸತ್ತವರಲ್ಲಿ ಬಹುತೇಕ ಮಂದಿ ಕ್ಯಾಂಪ್ ಸೆಲೆರ್ನೊ ಮಿಲಿಟರಿ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕೂಲಿ ಕೆಲಸಗಾರರೆಂದು ಹೇಳಲಾಗಿದೆ. ಸಮ್ಮಿಶ್ರ ಪಡೆಗಳಲ್ಲಿ ಸಾವುನೋವು ಉಂಟಾದ ಬಗ್ಗೆ ವರದಿಯಾಗಿಲ್ಲ.
ಖೋಸ್ಟ್ ಪಟ್ಟಣವು ಮಂಗಳವಾರ ಸಹ ಆತ್ಮಾಹುತಿ ಬಾಂಬ್ ದಾಳಿಗಳಿಗೆ ಗುರಿಯಾಗಿ 9 ಆಫ್ಘನ್ನರು ಅಸುನೀಗಿದ್ದರು.ಬುಧವಾರ ನಡೆದಿದ್ದು ಕಾರ್ ಬಾಂಬ್ ದಾಳಿಯೆಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಅಬ್ದುಲ್ ಕಯಾಮ್ ದೃಢಪಡಿಸಿದ್ದಾರೆ.
ಈ ಘಟನೆಯಲ್ಲಿ 21 ಮಂದಿ ಸ್ಥಳೀಯರು ಗಾಯಗೊಂಡಿದ್ದು 7 ಜನರು ಸತ್ತಿದ್ದಾರೆಂದು ಅಮೆರಿಕ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.ಖೋಸ್ಟ್ ಪಟ್ಟಣವು ತಾಲಿಬಾನ್ ಮತ್ತು ಸಮ್ಮಿಶ್ರ ಪಡೆಗಳ ನಡುವೆ ಆಗಾಗ್ಗೆ ಕದನಕ್ಕೆ ಸಾಕ್ಷಿಯಾಗಿದೆ. |